ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ತೇಜಸ್ ಸಿನಿಮಾ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಿಲ್ಲ. ಈಗ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ‘ತೇಜಸ್’ ಸಿನಿಮಾ ತೋರಿಸುವ ಮೂಲಕ ವೀಕ್ಷಕರ ಮನಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಯೋಗಿ ಆದಿತ್ಯನಾಥ್ ಸಿನಿಮಾ ವೀಕ್ಷಿಸಿದ ಕ್ಷಣಗಳನ್ನು ಕಂಗನಾ ರಣಾವತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ಬೆಂಬಲ ಸೂಚಿಸಿದ ಯೋಗಿಗೆ ಕಂಗನಾ ಧನ್ಯವಾದ ತಿಳಿಸಿದ್ದಾರೆ. ಈ ಸಿನಿಮಾ ನೋಡುವಾಗ ಯೋಗಿ ಭಾವುಕರಾಗಿ ಕಣ್ಣೀರು ಹಾಕಿದರು ಎಂದು ಕೂಡ ಕಂಗನಾ ಬರೆದುಕೊಂಡಿದ್ದಾರೆ.
ಇಂದು ಯೋಗಿ ಆದಿತ್ಯನಾಥ್ ಅವರಿಗೆ ಸೈನಿಕರ ಜೀವನಾಧಾರಿತ ‘ತೇಜಸ್’ ಸಿನಿಮಾ ತೋರಿಸಲಾಯಿತು. ತೇಜಸ್ ಸಿನಿಮಾದ ಕೊನೇ ಸಂಭಾಷಣೆಗಳನ್ನು ಕೇಳಿಸಿಕೊಂಡು ಯೋಗಿ ಅವರಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ’ ಎಂದು ಕಂಗನಾ ಅವರು ಪೋಸ್ಟ್ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.