ಮಂಗಳೂರು: ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಘಟನೆ ನಡೆದಿದ್ದು, ಶ್ರೀಧರ್ ಹೆಗಡೆ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ. ಅವರನ್ನು ಕೂಡಲೇ ನಗರದ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ.
ನಗರದ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಏಕಗವಾಕ್ಷಿ ಪದ್ದತಿ ತಂಡದ ಸದಸ್ಯರಾಗಿದ್ದರು. 2019ರಿಂದ ಬೆಳ್ತಂಗಡಿಯ ಕಡಿರು ಉದ್ಯಾವರ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರ ಜಾಗಕ್ಕೆ ಮತ್ತೊಬ್ಬರು ವರ್ಗಾವಣೆಯಾದ ಹಿನ್ನಲೆಯಲ್ಲಿ ಕಳೆದ ಫೆಬ್ರವರಿ ಹಾಗೂ ಮಾರ್ಚ್‌ನಿಂದ ಸ್ಥಳ ನಿರೀಕ್ಷಣೆಯಲ್ಲಿದ್ದರು. “ವೈಯಕ್ತಿಕ ಕಾರಣಗಳಿಂದ ಇಂದು ಆತ್ಮಹತ್ಯೆಗೆ ಯತ್ನಿಸಿದ ಇವರನ್ನು ಕೂಡಲೇ ವೆನ್‌ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು, ಆರೋಗ್ಯ ಸ್ಥಿರವಾಗಿದೆ. ಹೆಚ್ಚಿನ ನಿಗಾವಣೆಗಾಗಿ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ” ಎಂದು ಜಿಲ್ಲಾ ಪಂಚಾಯತ್ ಸಿಇಒ ಆನಂದ್ ತಿಳಿಸಿದ್ದಾರೆ.