ದಕ್ಷಿಣ ಕನ್ನಡ: ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಪರ ಮತಯಾಚನೆ ಆರೋಪ ಕೇಳಿಬಂದಿದ್ದು, ಚುನಾವಣಾಧಿಕಾರಿಗಳು ದಾಖಲಿಸಿದ್ದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಈ ಪ್ರಕರಣ ದ.ಕ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದ್ದು, ‘ನೀತಿ ಸಂಹಿತೆಗಿಂತ ಮೊದಲು ಆಹ್ವಾನ ಪತ್ರಿಕೆ ಮುದ್ರಣವಾಗಿದೆ’. ‘ಹೀಗಾಗಿ ಪುತ್ತೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ’ ಎಂದು ಹೈಕೋರ್ಟ್ ಆದೇಶ ನೀಡಿದೆ.
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿ ಪರ ಕಡಬ ತಾಲೂಕಿನ ಶಿವಪ್ರಸಾದ್ ಮತ ಕೇಳಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಶಿವಪ್ರಸಾದ್ ಎಂಬುವರ ವಿರುದ್ದ ಚುನಾವಣಾಧಿಕಾರಿ ಪ್ರಕರಣ ಹೂಡಿದ್ದರು. ಪುತ್ತೂರಿನ ಅಧೀನ ನ್ಯಾಯಾಲಯದಲ್ಲಿದ್ದ ಕೇಸು ರದ್ದತಿ ಕೋರಿ ಶಿವಪ್ರಸಾದ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶ ನೀಡಿದೆ.
ಅರ್ಜಿದಾರರು ವಿಚಿತ್ರ ಅಪರಾಧದ ಆರೋಪ ಎದುರಿಸುತ್ತಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂತಾಯ ಗ್ರಾಮದ ಶಿವಪ್ರಸಾದ್ ಅವರು ತಮ್ಮ ಮದುವೆ ಆಹ್ವಾನ ಪತ್ರಿಕೆಯಲ್ಲಿ ʼಮದುವೆಯಲ್ಲಿ ನೀವು ನನಗೆ ನೀಡುವ ಉಡುಗೊರೆ ನರೇಂದ್ರ ಮೋದಿಗೆ ಮತ ಹಾಕುವುದಾಗಿದೆʼ ಎಂದು ಮುದ್ರಿಸಿದ್ದರು.
ಇದು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 127ಎ ಅಡಿ ಅಪರಾಧವನ್ನಾಗಿ ಪರಿಗಣಿಸಿ ಎಂದು ದೂರು ದಾಖಲಾಗಿತ್ತು. ಆದರೆ ಅರ್ಜಿದಾರರ ಪರ ವಕೀಲರು ಚುನಾವಣೆ ಘೋಷಣೆಯಾಗುವುದಕ್ಕೂ ಮುಂಚೆಯೇ ಅರ್ಜಿದಾರರು ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ ಎಂದು ವಾದಿಸಿದ್ದರು.
ಹೀಗಾಗಿ ಅದು ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್ 127ಎ ಅಡಿ ಅಪರಾಧವಾಗುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಇದನ್ನು ಮಾಡಬಾರದು. ಚುನಾವಣೆಗೂ ಮುನ್ನ ಮಾಡಿದರೆ ಅದು ಅಪರಾಧವಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ. ಅರ್ಜಿದಾರರ ಪರ ವಕೀಲ ಎಂ ವಿನೋದ್ ಕುಮಾರ್ ವಾದ ಮಂಡಿಸಿದ್ದರು.
‘ಮೋದಿಗೆ ಮತ ಹಾಕಿದರೆ ನನಗೆ ಗಿಫ್ಟ್ ನೀಡಿದಂತೆ’ ಎಂದು ಮದುವೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣ ಮಾಡಿಸಿದ್ದರು. ಮಾರ್ಚ್ 1ರಂದು ಮದುವೆ ಆಹ್ವಾನ ಪತ್ರಿಕೆ ಮುದ್ರಣವಾಗಿತ್ತು.
ಆದರೂ ಸಹ ಅರ್ಜಿದಾರರ ವಿರುದ್ಧ ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
2024ರ ಲೋಕಸಭಾ ಚುನಾವಣೆ ವೇಳೆ ಸುಳ್ಯ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಕೆ ಎನ್ ಸಂದೇಶ್ ದೂರು ನೀಡಿದ್ದು, ಶಿವಪ್ರಸಾದ್ ವಿರುದ್ಧ ಪ್ರಜಾ ಪ್ರತಿನಿಧಿಗಳ ಕಾಯಿದೆ 127ಎ ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಶಿವಪ್ರಸಾದ್ ಹಾಗೂ ಆಮಂತ್ರಣ ಪತ್ರಿಕೆಯ ಮುದ್ರಕ ಎ. ಬಾಲಕೃಷ್ಣ ಅರ್ಜಿ ಸಲ್ಲಿಸಿದ್ದರು.