ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಳೆದ ಮೂರು ವರ್ಷಗಳಿಂದ ವರ್ಗಾವಣೆ ಸಿಗಲೇ ಇಲ್ಲ ಎಂಬ ಕಾರಣಕ್ಕೆ ದಯಾ ಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಪೊಲೀಸ್ ಇಲಾಖೆಯ ಅಧಿಕಾರಿಗಳು ಬರೆದ ಪತ್ರದಲ್ಲಿ ಕೆಲವೊಂದು ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಅಂತರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತಿ-ಪತ್ನಿಯರಿಗೆ ವರ್ಗಾವಣೆ ಆಗಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಾಗೂ KCSR ನಿಯಮದ ಪ್ರಕಾರ ಪತಿ-ಪತ್ನಿ ಆದವರು ಒಂದೇ ಘಟಕ ಹಾಗೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಪತಿ-ಪತ್ನಿ ಪ್ರಕರಣದಲ್ಲಿ ಕಳೆದ ಮೂರು ವರ್ಷಗಳಿಂದ ಗೃಹಸಚಿವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದ್ರೆ ಗೃಹ ಸಚಿವರು ವರ್ಗಾವಣೆ ಮಾಡುತ್ತೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ.
ನಾವು ಕಳೆದ 10-15 ವರ್ಷಗಳ ಕಾಲ ತಂದೆ-ತಾಯಿ, ಹೆಂಡತಿ-ಮಕ್ಕಳನ್ನು ಬಿಟ್ಟು ಕೆಲಸ ಮಾಡುತ್ತಿದ್ದೇವೆ. ನಾವು ಒಂದು ಕಡೆ, ಹೆಂಡತಿ ಒಂದು ಕಡೆ ನೌಕರಿ ಮಾಡುತ್ತಾ ಹೆತ್ತ ಮಕ್ಕಳ ಪಾಲನೆ ಮಾಡದೇ, ತಂದೆ-ತಾಯಿಯನ್ನೂ ಪೋಷಣೆ ಮಾಡಲಾಗದೇ ಜೀವನ ನಡೆಸುವಂತಾಗಿದೆ. ವರ್ಗಾವಣೆ ಆಗದೇ ಇರೋದಕ್ಕೆ ದಾಂಪತ್ಯದಲ್ಲಿ ಬಿರುಕುಂಟಾಗಿ ಎಷ್ಟೋ ಸಂಸಾರಗಳು ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿವೆ. ಕೆಲವು ವಿಚ್ಛೇದನ ಆಗಿಹೋಗಿದೆ ಎಂದೂ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪತಿ-ಪತ್ನಿ ಬೇರೆ ಬೇರೆ ಸ್ಥಳಗಳಲ್ಲಿ ಇರೋದ್ರಿಂದ ಕೆಲವರಿಗೆ ಮದುವೆಯಾಗಿ 5 ವರ್ಷ ಕಳೆದರೂ ಮಕ್ಕಳಾಗಿಲ್ಲ. ನಮ್ಮದು ಶಿಸ್ತಿನ ಇಲಾಖೆ, ಬೇರೆ ಇಲಾಖೆಯವರಂತೆ ಪ್ರತಿಭಟನೆ ಮಾಡಲು ಅವಕಾಶ ಇರುವುದಿಲ್ಲ. ಬೇರೆ ಇಲಾಖೆಗಳಲ್ಲಿ ಅಂತರ ಜಿಲ್ಲೆಗಳಿಗೆ ವರ್ಗಾವಣೆ ನಡೆದಿದೆ. ಆದ್ರೆ ಪೊಲೀಸ್ ಇಲಾಖೆಯಲ್ಲಿ 2021ರಿಂದಲೂ ವರ್ಗಾವಣೆ ಆಗಿಲ್ಲ. ಆದಕಾರಣ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ನೆಮ್ಮದಿ ಅನ್ನೋದು ಹಾಳಾಗಿ, ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. ಆದ ಕಾರಣ ನಮಗೆ ದಯಾಮರಣ ಕಲ್ಪಿಸಿಕೊಡಬೇಕು ಕೇಳಿಕೊಂಡಿದ್ದಾರೆ.