ದುಬೈ: ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬೈ) ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಳ ಅದ್ಧೂಯಾಗಿ ನೆರವೇರಿಸಲಾಯಿತು.
0೯ನೇ ನವೆಂಬರ್ ೨೦೨೪ರಂದು ಕ್ರೆಸೆಂಟ್ ಇಂಗ್ಲಿಷ್ ಸ್ಕೂಲ್, ಅಲ್ ಕ್ವಾಸಿಸ್, ದುಬೈ ಸಭಾಂಗಣದಲ್ಲಿ ಸಂಜೆ ೦೫ ಗಂಟೆಗೆ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬೈ) ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಸಿ.ಎನ್. ಮಂಜುನಾಥ್, ಸಂಸದರು – ಲೋಕಸಭಾ ಸದಸ್ಯರು, ಹೆಸರಾಂತ ಹೃದ್ರೋಗ ತಜ್ಞ, ಮತ್ತು ಬೆಂಗಳೂರಿನ ಜಯದೇವ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸ್ & ರಿಸರ್ಚ್‌ನ ಮಾಜಿ ನಿರ್ದೇಶಕರು, ದಂಪತಿ ಸಮೇತರಾಗಿ ಪಾಲ್ಗೊಂಡು ‘ಕನ್ನಡ ರತ್ನ’ ಪ್ರಶಸ್ತಿ ಸ್ವೀಕರಿಸಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಮತ್ತು ಮುಖ್ಯ ಭಾಷಣಕಾರರಾಗಿ ದುಬೈ ಕನ್ನಡಿಗರನ್ನುದ್ದೇಶಿಸಿ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಆರೋಗ್ಯ, ಆಹಾರ, ಸಂಬಂಧಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಕಾರ್ಯಕ್ರಮದ ಕೊನೆಯವರೆಗೂ ಪಾಲ್ಗೊಂಡು ದುಬೈ ಕನ್ನಡಿಗರಿಗೆ ಖುಷಿ ನೀಡಿದರು.
ಇದಲ್ಲದೇ ಪ್ರತಿ ವರ್ಷ ಗಲ್ಫ್ ರಾಷ್ಟ್ರಗಳ ಅದ್ಭುತ ಸಮಾಜ ಸೇವಕರನ್ನು ಗುರುತಿಸಿ ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬೈ) ಕೊಡ ಮಾಡುವ ಅಂತಾರಾಷ್ಟ್ರೀಯ ಡಾ. ಪುನೀತ್ ರಾಜಕುಮಾರ್ ಪ್ರಶಸ್ತಿಯನ್ನು ಶ್ರೀಯುತ ಬಾಲಕೃಷ್ಣ ಸಾಲಿಯಾನ್, ಸಮಾಜ ಸೇವಕರು, ದುಬೈ ಇವರಿಗೆ ಪ್ರದಾನ ಮಾಡಲಾಯಿತು.
ಶ್ರೀಮತಿ ಛಾಯಾದೇವಿ ಕೃಷ್ಣಮೂರ್ತಿ ಅವರ ಸಮಾಜಮುಖಿ ಮತ್ತು ಮಾನವಪರ ಕಾರ್ಯಗಳನ್ನು ಗೌರವಿಸಿ 2024ರ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಗಲ್ಫ್ ಸಮಾಜಕಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಂದರವಾದ ಸಂಜೆ ನೆಡೆದ ಕಾರ್ಯಕ್ರಮದಲ್ಲಿ ಕನ್ನಡ NRI ಫೋರಂನ ಅಧ್ಯಕ್ಷರಾದ ಡಾ, ಆರತಿ ಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ, ಡಾ. ಬಿ ಆರ್ ಶೆಟ್ಟಿ ಉದ್ಯಮಿಗಳು, ಪ್ರವೀಣ್ ಶೆಟ್ಟಿ ಅಧ್ಯಕ್ಷರು ಫಾರ್ಚ್ಯೂನ್ ಹೋಟೆಲ್ಸ್, ಸರ್ವೋತ್ತಮ ಶೆಟ್ಟಿ ಅಧ್ಯಕ್ಷರು ಅಬುಧಾಬಿ ಕನ್ನಡ ಸಂಘ, ಸತೀಶ್ ಪೂಜಾರಿ ಅಧ್ಯಕ್ಷರು ಶಾರ್ಜಾ ಕನ್ನಡ ಸಂಘ, ಬು ಅಬ್ದುಲ್ಲಾ ಉದ್ಯಮಿಗಳು ಯು ಎ ಈ, ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬೈ) ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸಾದನ್ ದಾಸ್ ಮುಂತಾದ ಗಣ್ಯರು ಮತ್ತು ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬೈ) ಸಂಘದ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಇದೇ ಕಾರ್ಯಕ್ರಮದಲ್ಲಿ ಡಾ. ಸುಷ್ಮಾ ಶಂಕರ್ ಅವರ ಭೂತದ ಹಾಡು ಪುಸ್ತಕನ್ನು ಲೋಕಾರ್ಪಣೆಗೊಳಿಸಲಾಯಿತು. ಅಲ್ಲದೇ ಅಂತಾರಾಷ್ಟ್ರೀಯ ಬೈಕ್ ರೇಸರ್ ಐಶ್ವರ್ಯ ಪಿಸ್ಸೆ ಅವರ ಸಾಧನೆಗಾಗಿ ಸನ್ಮಾನಿಸಲಾಯಿತು.
ದಿವಂಗತ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಕನ್ನಡಿಗರು ದುಬೈ ಸಂಘದ ಸದಸ್ಯರು ಗೌರವ ಸಲ್ಲಿಸಿದರು. ಅವರ ಮಗಳಾದ ಶ್ರೀಮತಿ ಸುಧಾ ನರಸಿಂಹರಾಜು ಅವರು ವಿಡಿಯೋ ಮೂಲಕ ದುಬೈ ಕನ್ನಡಿಗರಿಗೆ ವಂದನೆ ಸಲ್ಲಿಸಿದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭೈರತಿ ರಣಗಲ್ ಚಿತ್ರದ ಟ್ರೈಲರ್ ಅನ್ನು ಪ್ರದರ್ಶಿಸಿದ್ದು ದುಬೈ ಕನ್ನಡಿಗರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಕಾರ್ಯಕ್ರಮದ ಪ್ರಾಯೋಜಕರನ್ನು ಮುಖ್ಯ ಅತಿಥಿಗಳು ಸನ್ಮಾನಿಸಿ ಉತ್ತೇಜಿಸಿದ್ದು ಕಾರ್ಯಕ್ರಮದ ವಿಶೇಷಗಳಲ್ಲಿ ಒಂದು.
ಈ ಕಾರ್ಯಕ್ರಮಕ್ಕೆ ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಭಾಗವಹಿಸಿದ್ದರಲ್ಲದೇ ಕಲಾವಿದರು ಹಾಡು, ನೃತ್ಯ ಸೇರಿದಂತೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದುದ್ದಕ್ಕೂ ಹಳದಿ,ಕೆಂಪು ಬಾವುಟ ಹಾರಾಡಿ, ಎಲ್ಲರ ಬಾಯಲ್ಲಿ ಕನ್ನಡ ಜಯಘೋಷ ಮೊಳಗಿತು. ಕಾರ್ಯಕ್ರಮದ ನಿರೂಪಣೆಯನ್ನು ವಹಿಸಿದ್ದ ರವಿ ಸಂತು ಅಚ್ಚು ಕಟ್ಟಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆದರು.