ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಆಪ್‌ಗೆ ರಾಜೀನಾಮೆ

ನವದೆಹಲಿ: ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರದಲ್ಲಿ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಆಡಳಿತ ಸುಧಾರಣೆ, ಐಟಿ, ಗೃಹ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗಳನ್ನು ಹೊಂದಿದ್ದ ಕೈಲಾಶ್ ಗಹ್ಲೋಟ್ ಅವರು ತಮ್ಮ ರಾಜೀನಾಮೆಯನ್ನು ದೆಹಲಿಯ ಸರ್ಕಾರದ ಮಂತ್ರಿ ಮಂಡಳಿಗೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಅತಿಶಿ, ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಗಹ್ಲೋಟ್, ದೆಹಲಿಯ ಜನರಿಗೆ ನೀಡಿದ ಪ್ರಮುಖ ಭರವಸೆಗಳನ್ನು ಈಡೇರಿಸಲು ಪಕ್ಷದ ಅಸಮರ್ಥತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಮುನಾ ನದಿಯನ್ನು ಶುಚಿಗೊಳಿಸುವಲ್ಲಿ ವಿಫಲವಾಗಿರುವುದನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಹೊಸ ಅಧಿಕೃತ ಬಂಗಲೆಯ ಶೀಶ್‌ ಮಹಲ್‌ ವಿಚಾರದಲ್ಲಿ ಹಲವಾರು ಮುಜುಗರದ ಅಂಶಗಳಿವೆ. ಇದು ಸಾಮಾನ್ಯ ಜನರ ಪಕ್ಷವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಏನು ಉತ್ತರಿಸುವುದು ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ನಿರಂತರ ಜಗಳ ನಗರದ ಪ್ರಗತಿಗೆ ಅಡ್ಡಿಯಾಗಿದೆ. ದೆಹಲಿ ಸರ್ಕಾರವು ಕೇಂದ್ರದೊಂದಿಗೆ ಹೋರಾಡಲು ಹೆಚ್ಚಿನ ಸಮಯವನ್ನು ಕಳೆದರೆ, ದೆಹಲಿಯ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇದೆಲ್ಲ ಕಾರಣದಿಂದ ಪಕ್ಷದಿಂದ ದೂರ ಉಳಿಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಆಪ್‌, ಬಿಜೆಪಿ ತನ್ನ ಷಡ್ಯಂತ್ರ, ಕೀಳುಮಟ್ಟದ ರಾಜಕಾರಣದಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಒತ್ತಡಕ್ಕೆ ಒಳಗಾದ ಜಾರಿ ನಿರ್ದೇಶನಾಲಯ (ಇಡಿ)ಯಿಂದ ವಿಚಾರಣೆಗೆ ಒಳಗಾದ ಗಹ್ಲೋಟ್ ಅವರನ್ನು ಸಿಬಿಐ ಸೇರಿದಂತೆ ಕೇಂದ್ರೀಯ ಏಜೆನ್ಸಿಗಳು ಗುರಿಯಾಗಿಸುತ್ತಿವೆ ಎಂದು ಆರೋಪಿಸಿದೆ. ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಚುನಾವಣೆಗೆ ಮುಂಚಿತವಾಗಿ ಗಹ್ಲೋಟ್ ಅವರ ರಾಜೀನಾಮೆಯು ಆಮ್ ಆದ್ಮಿ ಪಕ್ಷಕ್ಕೆ ಗಮನಾರ್ಹ ಹಿನ್ನಡೆಯಾಗಿದೆ.

Font Awesome Icons

Leave a Reply

Your email address will not be published. Required fields are marked *