ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿ ಶಿಕ್ಷೆಗೆ ಗುರಿಯಾಗಿ ಬಿಡುಗಡೆಯಾಗಿರುವ ಮೂವರು ದೋಷಿಗಳನ್ನು ತಮ್ಮ ತವರು ದೇಶ ಶ್ರೀಲಂಕಾಗೆ ಭಾರಿ ಬಿಗಿ ಭದ್ರತೆಯಲ್ಲಿ ಕಳುಹಿಸಿಕೊಡಲಾಗಿದೆ. ದೋಷಿಗಳಾದ ಮುರುಗನ್, ರಾಬರ್ಟ್ ಪಯಸ್ ಮತ್ತು ಜಯಕುಮಾರ್ ಅವರನ್ನು ಉತ್ತಮ ನಡವಳಿಕೆಯ ಆಧಾರದಲ್ಲಿ 2022ರಲ್ಲಿಯೇ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿತ್ತು. ಅದರಂತೆ ಬಿಡುಗಡೆಯಾದ ಆರು ಜನರಲ್ಲಿ ಈ ಮೂವರು ಸೇರಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಅವರಿಗೆ ವಸತಿ ನೀಡಲಾಗಿದ್ದ ತಿರುಚಿರಾಪಳ್ಳಿಯ ವಿಶೇಷ ಶಿಬಿರದಿಂದ ಅವರನ್ನು ಇಂದು ಮುಂಜಾನೆ ಕರೆತಂದ ಪೊಲೀಸ್ ಅಧಿಕಾರಿಗಳ ತಂಡ ಬಳಿಕ ಅವರನ್ನು ಚೆನ್ನೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ವಿಮಾನ ಹತ್ತಿಸಿ ಬಿಡಲಾಗಿದೆ. ಅವರಿಗೆ ಇತ್ತೀಚೆಗಷ್ಟೇ ದ್ವೀಪ ರಾಷ್ಟ್ರ ಶ್ರೀಲಂಕಾದಿಂದ ಪಾಸ್‌ಪೋರ್ಟ್ ನೀಡಲಾಗಿತ್ತು.
ಈಗ ಶ್ರೀಲಂಕಾಗೆ ಹೊರಟ ಮೂವರಲ್ಲಿ ಒಬ್ಬರಾದ ಮುರುಗನ್ ಅವರು ಭಾರತೀಯ ಪ್ರಜೆಯಾದ ಬಿಡುಗಡೆಯಾದ ಆರು ಜನರಲ್ಲಿ ಒಬ್ಬರಾದ ನಳಿನಿ ಅವರನ್ನು ವಿವಾಹವಾಗಿದ್ದಾರೆ. ಹೀಗಾಗಿ ಪತಿ ಶ್ರೀಲಂಕಾಗೆ ತೆರಳುವ ಸಂದರ್ಭದಲ್ಲಿ ಪತ್ನಿ ನಳಿನಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕೆಲಕಾಲ ಆತನೊಂದಿಗೆ ಸಮಯ ಕಳೆದಿದ್ದಾರೆ.
ಮೂರು ದಶಕಗಳ ಹಿಂದೆ, ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿ, ಪ್ರಸ್ತುತ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಮಧ್ಯಸ್ಥಿಕೆಯಿಂದಾಗಿ ನಳಿನಿ ಅವರಿಗೆ ಮರಣದಂಡನೆ ಶಿಕ್ಷೆಯಿಂದ ಕ್ಷಮದಾನ ಸಿಕ್ಕಿತ್ತು.