ಬೇಸಿಗೆಯಲ್ಲಿ ಬಿಸಿಲ ಧಗೆಗೆ ದೇಹದ ಉಷ್ಣಾಂಶ ಹೆಚ್ಚಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ದೇಹವನ್ನು ತಂಪಾಗಿಸಿ, ಕಣ್ತುಂಬ ನಿದ್ದೆಯನ್ನು ಕೊಡಬೇಕಾದರೆ ಗಸಗಸೆ ಬಳಕೆ ಅತಿ ಮುಖ್ಯವಾಗಿದೆ. ಹೀಗಾಗಿ ಗಸಗಸೆ ಪಾಯಸವನ್ನು ಮಾಡಿ ಸೇವಿಸಿದ್ದೇ ಆದರೆ ಆರೋಗ್ಯವಾಗಿರಲು ಸಾಧ್ಯವಾಗಲಿದೆ. ಹಾಗಾದರೆ ಪಾಯಸ ಮಾಡುವುದು ಹೇಗೆ?
ಬೇಕಾಗುವ ಪದಾರ್ಥಗಳು: ಗಸಗಸೆ- 1ಕಪ್, ಬಾದಾಮಿ- 7, ಅಕ್ಕಿ- 1ಚಮಚ, ಹಾಲು- ಅರ್ಧ ಲೀಟರ್, ಏಲಕ್ಕಿ- 5, ಸಕ್ಕರೆ- ಅರ್ಧ ಕಪ್, ತುಪ್ಪ- 2ಚಮಚ, ದ್ರಾಕ್ಷಿ, ಗೋಡಂಬಿ- ಸ್ವಲ್ಪ, ಕೇಸರಿ- ಸ್ವಲ್ಪ, ಜಾಯಿಕಾಯಿ ರಸ- ಸ್ವಲ್ಪ, ಲವಂಗ- 3
ತಯಾರಿಸುವ ವಿಧಾನ: ಮೊದಲಿಗೆ ಅಕ್ಕಿಯನ್ನು ನೆನೆಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಕೇಸರಿಯನ್ನು ಹಾಲಿನಲ್ಲಿ ಅದ್ದಿಟ್ಟುಕೊಳ್ಳಬೇಕು. ಮತ್ತೊಂದೆಡೆ ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಇಷ್ಟು ಮಾಡಿದ ಬಳಿಕ ಗಸಗಸೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಇದರ ಜತೆಯಲ್ಲೇ ಬಾದಾಮಿಯನ್ನು ಹಾಕಿ ಹುರಿಯಬೇಕು. ನಂತರ ಬೇರೊಂದು ಪಾತ್ರೆಯಲ್ಲಿ ಕಾಯಿಸಿದ ಹಾಲನ್ನು ತೆಗೆದಿಟ್ಟುಕೊಳ್ಳಬೇಕು.
ಎಲ್ಲವನ್ನು ತಯಾರು ಮಾಡಿಟ್ಟುಕೊಂಡ ಬಳಿಕ ಹುರಿದ ಗಸಗಸೆ, ಬಾದಾಮಿ, ನೆನೆಸಿಟ್ಟ ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಬೇಕು. ಬಳಿಕ ತೆಗೆದು ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಕಾಯಿಸಿದ ಹಾಲನ್ನು ಸೇರಿಸಿ ನಿಧಾನ ಉರಿಯಲ್ಲಿ ಕುದಿಸಬೇಕು. ಕುದಿಯುವಾಗಲೇ ಸಕ್ಕರೆಯನ್ನು ಸೇರಿಸಬೇಕು. ತಳ ಹಿಡಿಯದಂತೆ ಮತ್ತು ಗಂಟು ಕಟ್ಟದಂತೆ ಮಾಡಲು ಸೌಟುನಿಂದ ತಿರುಗಿಸುತ್ತಿರಬೇಕು.
ಅದು ಚೆನ್ನಾಗಿ ಕುದಿಯುವಾಗ ಜಾಯಿಕಾಯಿ ರಸ ಮತ್ತು ಲವಂಗವನ್ನು ಹಾಕಬೇಕು. ಪಾಯಸ ಚೆನ್ನಾಗಿ ಕುದಿದ ಬಳಿಕ ಅದನ್ನು ಇಳಿಸಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಗೂ ಹಾಲಿನಲ್ಲಿ ಅದ್ದಿಟ್ಟ ಕೇಸರಿಯನ್ನು ಹಾಕಿ ಅಲಂಕರಿಸಿದರೆ ಘಮಘಮಿಸುವ ಗಸಗಸೆ ಪಾಯಸ ತಯಾರಾದಂತೆಯೇ…