ದ.ಕ ಜಿಲ್ಲೆಗೆ ಕೆಟ್ಟ ಹೆಸರು ತರುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ: ಗುಂಡೂರಾವ್

ಮಂಗಳೂರು: ಜೆರೋಸಾ ಶಾಲೆಯಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ ವಿವಾದ ವಿಚಾರ ಮಂಗಳೂರಿನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಇಲ್ಲಿ ನಾವು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಆಗಲಿಲ್ಲ. ಇದನ್ನ ಒಪ್ಪಿಕೊಳ್ಳುತ್ತೇವೆ. ಆದರೆ ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ. ಅಭಿವೃದ್ಧಿ, ಶಾಂತಿ ನೆಮ್ಮದಿ ಬೇಕಾ ಅಥವಾ ಧರ್ಮ, ಜಾತಿ, ಸ್ವಾರ್ಥ ಪ್ರಚೋದನಾಕಾರಿ ಮಾತುಗಳು ಬೇಕಾ ಎಂದು ಮಂಗಳೂರಿಗರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಕೇಳಿದರು.

ಜೆರೋಸಾ ಶಾಲಾ ಆವರಣದಲ್ಲಿ ಬಹಿರಂಗವಾಗಿ ಪ್ರಚೋದನಕಾರಿ, ದ್ವೇಷದ ರೌಡಿಗಳ ರೀತಿ ವರ್ತಿಸುವ ಕೆಲಸ ಶಾಸಕ ವೇದವ್ಯಾಸ ಕಾಮತ್ ಮಾಡಿದ್ದಾರೆ. ಶಾಲೆಯ ಮಕ್ಕಳನ್ನು ಸಹ ಉಪಯೋಗಿಸಿರುವುದು ಅಪರಾಧ. ಅದೆಲ್ಲವನ್ನು ಪೊಲೀಸರು ತನಿಖೆ ಮಾಡುತ್ತಾರೆ ಎಂದರು.

ಶಾಲೆ ವಿಚಾರದಲ್ಲಿ ಶಿಕ್ಷಣ ಇಲಾಖೆಯವರು ಸಹ ತನಿಖೆಗೆ ಆದೇಶ ಮಾಡಿದ್ದಾರೆ. ಅವತ್ತು ಒತ್ತಡದಿಂದ ಶಾಲೆಯವರು ತೀರ್ಮಾನ ಮಾಡಿದ್ದಾರೆ. ತನಿಖೆಯಲ್ಲಿ ತಪ್ಪು ಮಾಡಿರುವುದು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಿ. ಆದರೆ ವಾತಾವರಣವನ್ನು ಕೆಡಿಸಿ ತೀರ್ಮಾನಕ್ಕೆ ಬರುವುದಕ್ಕೆ ಸಾಧ್ಯನಾ? ಭಾವನೆ ಕೆರಳಿಸಬೇಕು ರಾಜಕಾರಣಕ್ಕೆ ಅನುಕೂಲ ಮಾಡಿಕೊಳ್ಳಬೇಕು ಎಂಬ ಭಾವನೆ ಬಿಜೆಪಿಯವರಿಗೆ ಇದೆ ಎಂದರು.

ಬಿಜೆಪಿಯವರು ಈ ವಿಚಾರದಲ್ಲಿ ಹೇಗೆ ನಡೆದುಕೊಂಡಿದ್ದಾರೆಂದು ಇಡೀ ದೇಶವೇ ನೋಡಿದೆ. ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತರುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ.

ರೌಡಿಸಂ ರೀತಿ ಭಯದ ವಾತವರಣ ಸೃಷ್ಟಿ ಮಾಡುವುದು, ಪ್ರಚೋದನಕಾರಿ ಹೇಳಿಕೆ ನೀಡುವುದು, ಧರ್ಮ ಧರ್ಮಗಳ ನಡುವೆ ವೈಷಮ್ಯ ಹೆಚ್ಚು ಮಾಡುವುದು ಖಂಡಿತವಾಗಿ ಅಪರಾಧ ಎಂದರು.

ಈ ಬಗ್ಗೆ ಸೋಷಿಯಲ್ ಮೀಡಿಯಾ, ಮಾಧ್ಯಮದಲ್ಲಿ ಇವರ ಹೇಳಿಕೆ ನೋಡಿದಾಗ ದೂರು ತೆಗೆದುಕೊಳ್ಳಲೇಬೇಕು. ಇವರು ಎಷ್ಟು ಪ್ರಕರಣಗಳನ್ನು ನಮ್ಮ ಮೇಲೆ ಹಾಕಿದ್ದಾರೆ? ಯಾವುದೋ ಒಂದು ಭಾಷಣ ಮಾಡಿದಕ್ಕೆ ರಾಹುಲ್ ಗಾಂಧಿ ಅವರ ಮೇಲೆ ಎಫ್​ಐಆರ್ ಹಾಕಿದ್ದಾರೆ. ಅವರ ಸಂಸದ ಸದಸ್ಯತ್ವನ್ನು ತೆಗೆದುಹಾಕುವ ಕೆಲಸ ಬಿಜೆಪಿಯವರು ಮಾಡಿದ್ದರು ಎಂದರು.

ಜನರ ಮುಂದೆ ಕೊಟ್ಟಿರುವ ಮಾತು ಉಳಿಸಿಕೊಂಡಿರುವ ಸರ್ಕಾರ ನಮ್ಮದು. ಒಳ್ಳೆಯ ಕೆಲಸ ಮಾಡಲು ಮುಖ್ಯಮಂತ್ರಿಗಳು ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಪಾಧನೆ ಮಾಡುತ್ತಿದ್ದಾರೆ. ಜನರ ವಿಶ್ವಾಸ ಗಳಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ ಇರುತ್ತದೆ. ಕೊಡಗಿನಲ್ಲಿ ನಾವು ಗೆದ್ದೆ ಇಲ್ಲ ಗೆದ್ದೆ ಇಲ್ಲ ಅಂತಿದ್ದರು. ಮೊನ್ನೆ ಎರಡು ಶಾಸಕ‌ ಸ್ಥಾನಗಳನ್ನು ಗೆದ್ದಿದೇವೆ. ಅದೇ ರೀತಿ ಜ‌ನರ ಮನಸ್ಸನ್ನು ನಾವು ಗೆಲ್ಲಬೇಕು ಎಂದರು.

ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಟೀಕೆ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಬಜೆಟ್ ಸಂದರ್ಭದಲ್ಲಿ ಆ ರೀತಿ ಹೇಳುವುದು ಸಹಜ. ಗ್ಯಾರಂಟಿ ಜಾರಿ ಬಳಿಕ ಏನೂ ಮಾಡಲು ಆಗಲ್ಲ ಅಂದುಕೊಂಡಿದ್ದರು. ಆದರೆ ಈಗ ಇದೆಲ್ಲ ಮಾಡಿರುವುದು ಬಿಜೆಪಿಯವರಿಗೆ ಆಶ್ಚರ್ಯ ಆಗಿದೆ. ಹೇಗೆ ರಿಯಾಕ್ಟ್ ಮಾಡಬೇಕು ಅಂತಾ ಬಿಜೆಪಿಯವರಿಗೆ ಗೊತ್ತಾಗುತ್ತಿಲ್ಲ ಎಂದರು.

ಬಿಜೆಪಿಯವರು ಬಾಯಿ ತೆರೆದರೆ ಬರೀ ಸುಳ್ಳೇ ಹೊರಗೆ ಬರುತ್ತಿದೆ. ಕೇವಲ ಪ್ರಚೋದನೆ ಮಾಡುವುದೇ ಬಿಜೆಪಿಯವರ ಅಭ್ಯಾಸ ಆಗಿದೆ. ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡೆ ರಾಜಕಾರಣ ಮಾಡುತ್ತಿದೆ ಎಂದರು.

ಕಾರ್ಕಳದ ಪರಶುರಾಮನ ವಿಗ್ರಹದಲ್ಲಿ ಏನಾಗಿದೆ ಇವತ್ತು? ಅದರ ಬಗ್ಗೆ ಯಾಕೆ ವೇದವ್ಯಾಸ ಕಾಮತ್ ಹೋರಾಟ ಮಾಡುತ್ತಿಲ್ಲ? ಪರಶುರಾಮರನ್ನು ಅಲ್ಲಿ ಅರ್ಧ ಶರೀರದಲ್ಲಿ ನಿಲ್ಲಿಸಿದ್ದಾರೆ. ಹಿಂದೂ ಧರ್ಮಕ್ಕೆ ಇದು ದೊಡ್ಡ ಕಳಂಕ. ಅದರ ಬಗ್ಗೆ ಬಿಜೆಪಿಯವರು ಯಾರೋಬ್ಬರು ಮಾತನಾಡುತ್ತಿಲ್ಲ. ಸುನೀಲ್ ಕುಮಾರ್ ಇದಕ್ಕೆ ಕಾರಣಕರ್ತರಲ್ವಾ? ಆವಾಗ ಹಿಂದೂ‌ ಧರ್ಮ ಜ್ಞಾಪಕಕ್ಕೆ ಬರಲ್ವಾ ಎಂದು ಪ್ರಶ್ನಿಸಿದರು.

ಇವಾಗ ಲೋಕಸಭಾ ಚುನಾವಣೆ ಬರುತ್ತಿದೆ. ಧರ್ಮಾಧರಿತವಾಗಿ ವೋಟ್ ಗಳಿಸಬೇಕೆಂದು ಈ ರೀತಿ ಮಾಡುತ್ತಿದ್ದಾರೆ. ಇದು ಜಿಲ್ಲೆಗೆ ದೊಡ್ಡ ಡ್ಯಾಮೇಜ್. ಹೊರಗಿನ ಜನ ಮಂಗಳೂರಿನಲ್ಲಿ ದಿನ ಇದೇ ಕಥೆ ಅಲ್ವಾ ಅಂತಾ ನೋಡುತ್ತಿದ್ದಾರೆ. ಸಮಾಜವನ್ನು ಒಡೆಯುತ್ತಿರುವ ಕೆಲಸ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಶರಣ್ ಪಂಪುವೆಲ್ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ಹಿಂದೂ ಧರ್ಮವನ್ನು ಪ್ರಚೋದಿಸಿ ಉಪಯೋಗಿಸುತ್ತಿದ್ದಾರೆ ಎಂದರು.

ಭರತ್ ಶೆಟ್ಟಿ ಸ್ಥಳದಲ್ಲಿ ಇಲ್ಲದಿದ್ದರೂ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಕ್ರಿಶ್ಚಿಯನ್ ಶಾಲೆಗಳಿಗೆ ಹಿಂದೂಗಳು ಹೋಗಬಾರದೆಂದು ಸಹ ಹೇಳಿದ್ದಾರೆ. ಕೆಟ್ಟ ವಾತಾವರಣ ನಿರ್ಮಾಣ ಮಾಡಲು ಅವರ ಪಾತ್ರವು ಇದೆ. ಇದಕ್ಕೆ ಸಾಕ್ಷಿಯು ಸಹ ಇದೆ. ಅವರು ಲಂಡನ್​ನಲ್ಲಿ ಕೂತು ಆ ರೀತಿಯ ಹೇಳಿಕೆ ಕೊಟ್ಟರೂ ತಪ್ಪು. ಪೊಲೀಸ್ ತನಿಖೆ ಮೇಲೆ ನಾವು ಹಸ್ತಕ್ಷೇಪ ಮಾಡಲ್ಲ ಎಂದರು.

Font Awesome Icons

Leave a Reply

Your email address will not be published. Required fields are marked *