ಹಾಸನ: ನಾನು ಬ್ಲಾಕ್ಮೇಲ್ಗೆ ಹೆದರುವುದಿಲ್ಲ ಎಂದು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಅವರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ 40 ವರ್ಷಗಳಿಂದ ನಾನು ರಾಜಕಾರಣ ಮಾಡುತ್ತಿದ್ದೇನೆ.
ಕೆಲವರು ರಾಜಕೀಯವಾಗಿ ನನ್ನನ್ನು ಮುಗಿಸಲು ಸಂಚು ಮಾಡಿದ್ದಾರೆ. ಬೇರೆಯವರಿಗೆ ಏನು ಬೇಕಾದರೂ ಬ್ಲಾಕ್ಮೇಲ್ ಮಾಡಿಕೊಳ್ಳಲಿ. ಕೆಲವರ ಮಾತಿಗೆ ನಾನು ಉತ್ತರ ಕೊಡಲ್ಲ, ಬ್ಲಾಕ್ಮೇಲ್ಗೆ ಹೆದರಲ್ಲ. ಆರೋಪ ಹಾಗೂ ಅಪಪ್ರಚಾರಕ್ಕೆ ಕಾನೂನು ರೀತಿ ಉತ್ತರ ಕೊಡುವೆ. ಬೇರೆಯವರ ಬಳಿ ಬ್ಲಾಕ್ಮೇಲ್ ಮಾಡಿ ಯಶಸ್ವಿ ಆಗಿರಬಹುದು. ಅಂಥದೆಲ್ಲಾ ನನ್ನ ಬಳಿ ಆಗಲ್ಲ ಎಂದು ದೇವರಾಜೇಗೌಡ ರ ವಿರುದ್ಧ ಧ್ವನಿ ಎತ್ತಿದ್ದಾರೆ.
ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆಗೆ ಸಿದ್ಧನಿದ್ದೇನೆ. ನಾವು ಭ್ರಷ್ಟಾಚಾರ ಮಾಡಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಅದೇನೋ ತೋರಿಸುವೆ ಅಂದಿದ್ದಾರಲ್ಲ ಅದನ್ನು ಅವರು ತೋರಿಸಲಿ. ಆಮೇಲೆ ನಾನೇನು ಎಂದು ತೋರಿಸುವೆ ಎಂದರು.
ರಾಜಿಗೆ ನಾನು ಯಾರನ್ನೂ ಕಳಿಸಿಲ್ಲ ಇಂಥವರನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಬಿಜೆಪಿಗೆ ಇಂಥ ಪರಿಸ್ಥಿತಿ ಬರಬಾರದಿತ್ತು, ಇಂಥವರನ್ನು ಇಟ್ಟುಕೋಬೇಕು ಅಂದರೆ ನಾನೇನು ಮಾಡಲು ಆಗಲ್ಲ. ಕೆಲ ಶಕ್ತಿಗಳು ಬ್ಲಾಕ್ ಮೇಲ್ ಮಾಡುವವರ ಜೊತೆ ಸೇರಿದ್ದಾರೆ. ಜನ, ದೇವರು ನಮ್ಮ ಮುಗಿಸಬೇಕು ಬೇರೆಯವರು ಏನೂ ಮಾಡಲಾಗಲ್ಲ. ನಾನು ರಾಜಿಗೆ ಯಾರನ್ನೂ ಕಳಿಸಿಲ್ಲ ಅದರ ಅಗತ್ಯ ಇಲ್ಲ ಎಂದು ಹೇಳಿದರು.