ಬೆಂಗಳೂರು: ನೆಲಮಂಗಲದಲ್ಲಿ ನಡೆದ ಗುತ್ತಿಗೆದಾರರ ಸಮಾವೇಶದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,ಈ ಹಿಂದೆ ಬಿಜೆಪಿಯವರು ಅವರ ಸರ್ಕಾರವಿದ್ದಾಗ ಹಣ ಇಲ್ಲದೆ ಟೆಂಡರ್ ಕರೆದಿದ್ದರು. ಒಂದೇ ಬಾರಿ ಬಾಕಿ ಬಿಲ್ ರಿಲೀಸ್ ಮಾಡಿ ಎಂದು ಕೇಳಿದ್ದೀರಿ. ಹಾಗೆ ಮಾಡಲು ನಾನೇನು ದುಡ್ಡು ಪ್ರಿಂಟ್ ಮಾಡಲೇ ಎಂದು ಸಿದ್ದರಾಮಯ್ಯ ಗುತ್ತಿಗೆದಾರರನ್ನು ಪ್ರಶ್ನಿಸಿದರು.
ದುಡ್ಡು ಬಿಡುಗಡೆ ಮಾಡಿ ಟೆಂಡರ್ ಕರೆಯಲು ಸರ್ಕಾರ ಬೋರ್ಡ್ಗಳಿಗೆ ಸೂಚಿಸಬೇಕು. ಆದರೆ ಬಿಜೆಪಿಯವರು ಬೋರ್ಡ್ ಮಟ್ಟದಲ್ಲಿ ಟೆಂಡರ್ ಕರೆಸಿ ಕೆಲಸ ಮಾಡಿಸಿದ್ದಾರೆ. ಅದೂ ದುಡ್ಡು ಕೊಟ್ಟಿಲ್ಲ. ದುಡ್ಡ ಇಲ್ಲದೇ ಇದ್ರೂ ಘೋಷಿಸಿ ಹೋಗಿದ್ದಾರೆ. ಗುತ್ತಿಗೆದಾರರ ಎಲ್ಲಾ ಬೇಡಿಕೆಯನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ.
ಇದರ ಬಗ್ಗೆ ಲೋಕೋಪಯೋಗಿ ಸಚಿವರಿಗೆ ಚರ್ಚೆ ಮಾಡಲು ಹೇಳಿದ್ದೇನೆ. ನಮ್ಮ ಸರ್ಕಾರ ಬಂದ ಮೇಲೆ ಗುತ್ತಿಗೆದಾರರನ್ನು ಕರೆದು ನಾಲ್ಕೈದು ಬಾರಿ ಸಭೆ ಮಾಡಿದ್ದೇನೆ. ಎಲ್ಲಾ ಬಾರಿಯೂ ಪ್ಯಾಕೇಜ್ ಸಿಸ್ಟಮ್ ಹಾಗೂ ಬಾಕಿ ಮೊತ್ತಕ್ಕೆ ಒತ್ತಡ ತರುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ಬಳಿಕವೂ ಬಾಕಿ ಬಿಲ್ ಬಿಡುಗಡೆ ಮಾಡಲು 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಇತ್ತೀಚೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ಇದನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು.
ಇದಾದ ಕೆಲವೇ ದಿನಗಳಲ್ಲಿ ಮತ್ತೆ ಪತ್ರಿಕಾಗೋಷ್ಠಿ ನಡೆಸಿದ್ದ ಕೆಂಪಣ್ಣ, ಕಮಿಷನ್ಗೆ ಬೇಡಿಕೆಯಿಡದೆ ಲೋಕೋಪಯೋಗಿ ಇಲಾಖೆಯ 600 ಕೋಟಿ ರೂ. ಮೊತ್ತದ ಬಿಲ್ ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದರು. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ನಿರಾಳವಾಗಿತ್ತು.
ನಾನು ಹಣಕಾಸು ಸಚಿವನಾಗಿದ್ದಾಗ ಐದು ಪೈಸೆ ಗುತ್ತಿಗೆದರರಿಂದ ಕೇಳಿಲ್ಲ. ಗುತ್ತಿಗೆದಾರರು ಎನ್ಒಸಿ ಪಡೆಯಲು ನಾನು ಹಣ ಪಡೆದಿಲ್ಲ. ಹಾಗೆ ಕೇಳಿದ್ದು ಯಾರಾದರೂ ತೋರಿಸಿದರೆ ಈಗಲೇ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ. ರಾಜೀನಾಮೆ ಕೊಟ್ಟು ಬಿಡ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.