ನಾಳೆಯಿಂದ ನಡೆಯಬೇಕಿದ್ದ ಕೆಪಿಎಸ್ಸಿ ಗ್ರೂಪ್ ಬಿ ಪರೀಕ್ಷೆ ಮುಂದೂಡಿಕೆ!

ಬೆಂಗಳೂರು: ಕೊನೆ ಕ್ಷಣದಲ್ಲಿ ಕೆಪಿಎಸ್​ಸಿ ಗ್ರೂಪ್ ಬಿ ಪರೀಕ್ಷೆ ಮುಂದೂಡಲಾಗಿದೆ. ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ಸರ್ಕಾರ ನೀಡಿದೆ. ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿ ಅನ್ವಯವಾಗುವಂತೆ ವಯೋಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ನಾಳೆಯಿಂದ ನಡೆಯಬೇಕಿದ್ದ ಕೆಪಿಎಸ್ಸಿ ಗ್ರೂಪ್ ಬಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ.

ಸರ್ಕಾರದ ಈ ಆದೇಶದಿಂದ ಎಲ್ಲಾ ಹುದ್ದೆಗಳಿಗೂ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ನಾಳೆ ಕಡ್ಡಾಯ ಕನ್ನಡ ಹಾಗೂ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆ ಇತ್ತು. ಆದರೆ ಸರ್ಕಾರ ಈ ನಿರ್ಧಾರದಿಂದ ಪರೀಕ್ಷೆ ಮುಂದೂಡಲಾಗಿದೆ. ಹೀಗಾಗಿ ಕೆಪಿಎಸ್ಸಿ ಕೈಗೊಂಡಿರುವ ಪರೀಕ್ಷೆಯಲ್ಲಿ ಕೊನೆ ಕ್ಷಣದ ಬದಲಾವಣೆಯಿಂದ‌ ಪರೀಕ್ಷಾರ್ಥಿಗಳು ಕಂಗೆಟ್ಟಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಪಿಎಸ್​ಸಿ ನಾಳೆ ನಡೆಯಬೇಕಿದ್ದ ಕೆಪಿಎಸ್​ಸಿಯ ವಿವಿಧ ಗ್ರೂಪ್-ಬಿ ಹುದ್ದೆಗಳ ಪರೀಕ್ಷೆ ಮುಂದೂಡಲಾಗಿದೆ. 14-09-2024 ಮತ್ತು 15-09-2024ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಅಭ್ಯರ್ಥಿಗಳನ್ನು ಪರೀಕ್ಷಾ ಉಪ ಕೇಂದ್ರಗಳ ಹಂಚಿಕೆ ಕೂಡ ಮಾಡಲಾಗಿತ್ತು.

ಈ ಮಧ್ಯೆ ದಿನಾಂಕ 10-09-2024ರಂದು ಕರ್ನಾಟಕ ಸರ್ಕಾರ ತನ್ನ ನಡಾವಳಿಗಳಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಟ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದೆ. ಹಾಗಾಗಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮಾರ್ಚ್​ 13 ರನ್ವಯ ಅಧಿಸೂಚಿಸಿರುವ ಎಲ್ಲಾ ಹುದ್ದೆಗಳಿಗೂ ವಯೋಮಿತಿ ಸಡಿಲಿಕೆ ಅನ್ವಯಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

Font Awesome Icons

Leave a Reply

Your email address will not be published. Required fields are marked *