ದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್ ತಮ್ಮ ಬಾಕ್ಸಿಂಗ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಬುಧವಾರ ರಾತ್ರಿ ನಡೆದ ಕಾರ್ಯಕ್ರಮವೊಂದರಲ್ಲಿ ಮೇರಿ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 23 ವರ್ಷಗಳ ತಮ್ಮ ಬಾಕ್ಸಿಂಗ್ ಕೆರಿಯರ್ಗೆ ಮೇರಿ ಕೋಮ್ ಗುಡ್ ಬೈ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಾನು ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ನನಗೆ ಇನ್ನೂ ಸ್ಪರ್ಧಿಸುವ ಹಸಿವು ಇದೆ. ಆದರೆ ಅಂತರಾಷ್ಟ್ರೀಯ ಬಾಕ್ಸಿಂಗ್ ಫೆಡರೇಶನ್ ನಿಯಮಗಳು ನನಗೆ ಹಾಗೆ ಮಾಡಲು ಅನುಮತಿಸುವುದಿಲ್ಲ. ಪುರುಷ ಮತ್ತು ಮಹಿಳಾ ಬಾಕ್ಸರ್ಗಳಿಗೆ 40 ವರ್ಷ ವಯಸ್ಸಿನವರೆಗೆ ಮಾತ್ರ ಹೋರಾಡಲು ಅವಕಾಶವಿದೆ. ಆದ್ದರಿಂದ ನಾನು ಈಗ ಯಾವುದೇ ದೊಡ್ಡ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹೀಗಾಗಿ ನಿವೃತ್ತಿ ನಿರ್ಧಾರ ಮಾಡಿದ್ದೇನೆ ಎಂದು 41 ವರ್ಷದ ಮೇರಿ ಕೋಮ್ ತಿಳಿಸಿದ್ದಾರೆ.
ಮೇರಿ ಕೋಮ್ 6 ಬಾರಿ ವಿಶ್ವ ಚಾಂಪಿಯನ್ ಕಿರೀಟ ತಮ್ಮದಾಗಿಸಿಕೊಂಡಿದ್ದರು. ನಿಖರ ಪಂಚ್ಗಳಿಗೆ ಹೆಸರುವಾಸಿಯಾಗಿದ್ದ ಕೋಮ್ ಈ ಸಾಧನೆ ಮಾಡಿದ ಏಕೈಕ ಮಹಿಳಾ ಬಾಕ್ಸರ್ ಎಂಬುದು ವಿಶೇಷ. ಇದಲ್ಲದೆ 5 ಬಾರಿ ಏಷ್ಯನ್ ಚಾಂಪಿಯನ್ಶಿಪ್ ಗೆದ್ದ ಏಕೈಕ ಆಟಗಾರ್ತಿ ಎಂಬ ದಾಖಲೆ ಕೂಡ ಮೇರಿ ಕೋಮ್ ಹೆಸರಿನಲ್ಲಿದೆ.
ಮೇರಿ ಕೋಮ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಐಬಿಎ) ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ. 2005, 2006, 2008 ಮತ್ತು 2010 ರಲ್ಲಿ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದಿದ್ದರು. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ 51ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. 2018 ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ತಮ್ಮ ಆರನೇ ಪ್ರಶಸ್ತಿಯನ್ನು ಗೆದ್ದರು.