ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದ, ಹಲವು ಕುಕೃತ್ಯಗಳಿಗೆ ಸಂಚು ಹೂಡಿದ್ದ, ನಿಷೇಧಿತ ಸಿಮಿ ಸಂಘಟನೆಯ ಉಗ್ರನನ್ನು ದೆಹಲಿ ಪೊಲೀಸ್ ವಿಶೇಷ ದಳ ಬಂಧಿಸಿದೆ.
ಬಂಧಿತ ಆರೋಪಿಯನ್ನು ಹನೀಫ್ ಶೇಖ್ ಎಂದು ಗುರುತಿಸಲಾಗಿದೆ. ಈತ ಮಹಾರಾಷ್ಟ್ರದ ಉರ್ದು ಶಾಲೆಯೊಂದರಲ್ಲಿ ಮಾರುವೇಷದಲ್ಲಿ ಶಿಕ್ಷಕನಾಗಿ ಪಾಠ ಮಾಡುತ್ತಿದ್ದ.
2001ರಲ್ಲಿ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಮತ್ತು ದೇಶದ್ರೋಹ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.
ನ್ಯಾಯಾಲಯವಯ ಹನೀಫ್ ಶೇಖ್ನನ್ನು ತಲೆಮರೆಸಿಕೊಂಡಿರುವ ಆರೋಪಿ ಘೋಷಿಸಿತ್ತು. ಹನೀಫ್ ಸಿಮಿ ಸಂಘಟನೆಯ ನಿಯತಕಾಲಿಕೆ ಇಸ್ಲಾಮಿಕ್ ಮೂವ್‌ಮೆಂಟ್ (ಉರ್ದು ಆವೃತ್ತಿ) ಸಂಪಾದಕನಾಗಿದ್ದ. ಆರೋಪಿಯು ಕಳೆದ 25 ವರ್ಷಗಳ ಅವಧಿಯಲ್ಲಿ ಯುವಕರಿಗೆ ಮೂಲಭೂತವಾದದ ಬಗ್ಗೆ ಪ್ರಚೋದನೆ ನೀಡಿದ್ದ. ಮಹಾರಾಷ್ಟ್ರದಲ್ಲಿ ಹಲವು ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ. ಅನೇಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಆತ ಶಾಮೀಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಇನ್ಸ್‌ಪೆಕ್ಟರ್ ಪವನ್‌ಗೆ ಹನೀಫ್ ಶೇಖ್ ಬಗ್ಗೆ ಮಾಹಿತಿ ಸಿಕ್ಕಿತು. ಹನೀಫ್ ತನ್ನ ಗುರುತನ್ನು ಮೊಹಮ್ಮದ್ ಎಂದು ಬದಲಾಯಿಸಿದ್ದ. ಹನೀಫ್ ಈಗ ಮಹಾರಾಷ್ಟ್ರದ ಭೂಸಾವಲ್‌ನಲ್ಲಿರುವ ಉರ್ದು ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ವಿವರ ದೊರೆಯಿತು. ಫೆಬ್ರವರಿ 22 ರಂದು ಮೊಹಮ್ಮದ್ದೀನ್ ನಗರದಿಂದ ಖಡ್ಕ ರಸ್ತೆ ಕಡೆಗೆ ಬರುತ್ತಿದ್ದ ಆರೋಪಿಯನ್ನು ಮಹಾರಾಷ್ಟ್ರದ ಭೂಸಾವಲ್ ಖಡ್ಕ ರಸ್ತೆಯ ಆಶಾ ಟವರ್ ಬಳಿ ಪೊಲೀಸ್ ತಂಡವು ಮುತ್ತಿಗೆ ಹಾಕಿತು.
ಏನಿದು ಸಿಮಿ?: ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಅನ್ನು 1976 ರಲ್ಲಿ ಉತ್ತರ ಪ್ರದೇಶದ ಅಲಿಗಢದಲ್ಲಿ ಸ್ಥಾಪನೆಯಾಗಿತ್ತು. ಇಸ್ಲಾಂ ಸಾಮ್ರಾಜ್ಯವನ್ನು ಸ್ಥಾಪಿಸುವುದು ಈ ಸಂಸ್ಥೆಯ ಗುರಿ ಎಂದು ಹೇಳಲಾಗಿದೆ.