ಉಳ್ಳಾಲ: ಕುಡಿಯುವ ನೀರಿನಲ್ಲಿ ತೈಲಾಂಶ ಸೇರಿ ಗ್ರಾಮಸ್ಥರ ಪ್ರಾಣಕ್ಕೆ ಕುತ್ತಾಗಿದ್ದು, ಜೀವಜಲವೇ ವಿಷವಾಗಿ ಬದಲಾದ ಘಟನೆ ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಸಂಬಾರ ತೋಟ ಬಳಿ ನಡೆದಿದೆ.
ಹತ್ತಾರು ಬಾವಿ, ಕೊಳವೆ ಬಾವಿಗಳ ನೀರಿನಲ್ಲಿ ಭಾರೀ ಪ್ರಮಾಣದ ತೈಲಾಂಶ ಪತ್ತೆಯಾಗಿದೆ. ನೀರಿನಲ್ಲಿ ವಿಪರೀತ ತೈಲ ವಾಸನೆ ಜೊತೆಗೆ ಬಾರಿ ಪ್ರಮಾಣದಲ್ಲಿ ತೈಲದ ಅಂಶ ಸಂಗ್ರಹವಾಗಿದೆ. ತೈಲ ಮಿಶ್ರಿತ ನೀರು ಸೇವಿಸಿ ಹಲವು ಜನರಿಗೆ ಅರೋಗ್ಯ ಸಮಸ್ಯೆ ಉಂಟಾಗಿದೆ.
ಮುಡಿಪು ಪೇಟೆಯಿಂದ ಸುಮಾರು 3 ಕಿ.ಮೀ ದೂರವಿರುವ ಸಂಬಾರ ತೋಟ ಪ್ರದೇಶ 100 ಮನೆಗಳಿದ್ದು, ಸುಮಾರು 10 ಕೊಳವೆ ಬಾವಿ ಹಾಗೂ ಕೆಲವು ಬಾವಿಗಳ ನೀರಿನಲ್ಲಿ ತೈಲ ಗೋಚರಿಸಿದೆ. ಡೀಸೆಲ್ ಮಾದರಿಯ ಭಾರೀ ಪ್ರಮಾಣದ ತೈಲದ ಅಂಶ ಪತ್ತೆಯಾಗಿದೆ.
ಆರು ತಿಂಗಳ ಹಿಂದೆಯೇ ಕೆಲ ಬಾವಿ ನೀರಿನಲ್ಲಿ ಈ ರೀತಿಯ ಅಂಶ ಕಂಡುಬಂದಿತ್ತು. ಈ ಬಗ್ಗೆ ಪಜೀರು ಪಂಚಾಯತಿ ಹಾಗೂ ಇನ್ನಿತರ ಇಲಾಖೆಗಳ ಗಮನಕ್ಕೆ ತರಲಾಗಿತ್ತು. ಇದೀಗ ಈ ಭಾಗದ ಹೆಚ್ಚಿನ ಬಾವಿ ನೀರಲ್ಲೂ ತೈಲದ ವಾಸನೆ ಬರುತ್ತಿದೆ. ಸಂಬಾರತೋಟದ ಮುಖ್ಯ ರಸ್ತೆಗೆ ತಾಗಿಕೊಂಡೇ ಇರುವ ಪೆಟ್ರೋಲ್ ಪಂಪ್ ಮೇಲೆ ಅನುಮಾನ ಉಂಟಾಗಿದೆ.
ಪೆಟ್ರೋಲ್ ಪಂಪ್ ನ ತಳ ಟ್ಯಾಂಕ್ ನಲ್ಲಿ ತೈಲ ಸೋರಿಕೆ ಅನುಮಾನ ಸೃಷ್ಟಿಯಾಗಿದ್ದು, ಸಮಸ್ಯೆ ಆರಂಭವಾದಾಗಿನಿಂದಲೇ ಸ್ಥಳೀಯರಿಂದಲೇ ಬಾವಿಯ ನೀರಿನ ಟೆಸ್ಟ್ ಮಾಡಲಾಗಿದೆ. ಕಾರ್ಬನ್ ಅನಾಲಿಸ್ಟಿಕ್ ಟೆಸ್ಟ್, ವಿಒಸಿ ಟೆಸ್ಟ್, ಮಂಗಳೂರು ಬಯೊಟೆಕ್ ಲ್ಯಾಬೊರೇಟರಿ ಸೇರಿದಂತೆ ಆರೋಗ್ಯ ಇಲಾಖೆಯಿಂದ ಪರೀಕ್ಷೆ ಮಾಡಲಾಗಿದೆ.
ಟೇಸ್ಟ್ಬಲ್ಲಿ ತೈಲಾಶಂ ಮಿಶ್ರಿತ ಪ್ರಮಾಣ ಕಂಡು ಬಂದ ಕಾರಣ ಕುಡಿಯಲು ಯೋಗ್ಯವಲ್ಲ ಎಂದು ವರದಿಯಾಗಿದೆ. ಗ್ರಾಮದ ಮಕ್ಕಳಿಗೆ ಕೆಮ್ಮು, ವಾಂತಿ–ಭೇದಿ ಸೇರಿ ಹಲವು ರೀತಿಯ ಚರ್ಮದ ಸಮಸ್ಯೆ ಉಂಟಾಗಿದೆ. ದ.ಕ ಜಿಲ್ಲಾಡಳಿತ ಸೇರಿ ಎಲ್ಲ ಇಲಾಖೆಗಳಿಗೂ ಮನವಿ ನೀಡಿದರೂ ಸಮಸ್ಯೆಗೆ ಪರಿಹಾರ ಒದಗಿಲ್ಲ.
ಪಂಚಾಯತ್ ನೀರಿನಲ್ಲಿ ವ್ಯವಸ್ಥೆಯೂ ಇಲ್ಲದೇ ಕುಡಿಯಲು ಬಿಸ್ಲೆರೀ ನೀರು ಬಳಕೆ ಮಾಡುವಂತಾಗಿದೆ. ಸ್ಪೀಕರ್ ಯು.ಟಿ.ಖಾದರ್ ನಿರ್ದೇಶನದಂತೆ ಉಳ್ಳಾಲ ತಹಶೀಲ್ದಾರ್ ಸೇರಿ ಅಧಿಕಾರಿಗಳ ಭೇಟಿ ನೀಡಿದ್ದಾರೆ. ಬಾವಿಗಳಲ್ಲಿ ಇಂಧನ ಮಿಶ್ರಿತ ನೀರಿನಿಂದ ಉಪಯೋಗಕ್ಕೆ ಬಳಸಲಾಗದ ಸ್ಥಿತಿ ಇದ್ದು, ರೋಗ ಉಲ್ಬಣದ ಆತಂಕ ಉಂಟಾಗಿದೆ. ಸ್ಥಳೀಯ ಪೆಟ್ರೋಲ್ ಪಂಪ್ ಕಾರಣದಿಂದಲೇ ಭಾರೀ ಅನಾಹುತ ಶಂಕೆ ವ್ಯಕ್ತವಾಗಿದೆ. ಕೆಲ ಗರ್ಭಿಣಿಯರು ನೀರು ಕುಡಿಯಲಾಗದೇ ಮನೆ ಬಿಟ್ಟು ಬೇರೆಡೆ ಶಿಫ್ಟ್ ಆಗಿದ್ದಾರೆ.