ಮೈಸೂರು,ನವೆಂಬರ್,29,2024 (www.justkannada.in): ಕುಡಿಯಲು ಹಣ ನೀಡದ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಮಂಜುನಾಥ @ ಮಂಜು(37) ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ. ಈತನ ಪತ್ನಿ ಶೋಭಾ ಕೊಲೆಯಾದವರು. ಹೆಚ್.ಡಿ.ಕೋಟೆ ಮುಸ್ಲಿಂ ಬ್ಲಾಕ್ ನ ನಾಗಮ್ಮನ ಬಡಾವಣೆಯಲ್ಲಿ ದಂಪತಿಗಳು ವಾಸವಾಗಿದ್ದರು.
ಮೃತ ಶೋಭಾ ಅವರು ಮೃತಪಡುವ 4 ವರ್ಷಗಳ ಹಿಂದೆ ಆರೋಪಿ ಮಂಜುನಾಥ ನನ್ನು 2ನೇ ಮದುವೆ ಮಾಡಿಕೊಂಡು ವಾಸವಾಗಿದ್ದರು. ಈ ನಡುವೆ ದಿ:29-05-2022 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಆರೋಪಿಯು ಕುಡಿಯಲು ಹಣ ಕೊಡು ಎಂದು ಶೋಭಾಳ ಜೊತೆ ಗಲಾಟೆ ಮಾಡಿದ್ದು, ಶೋಭಾ ಹಣ ಕೊಡದೇ ಇದ್ದಾಗ ಅವಳನ್ನು ಕೊಲೆ ಮಾಡುವ ಉದ್ದೇಶದಿಂದ ಅವಳ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದು ತನಿಖೆಯಿಂದ ದೃಢಪಟ್ಟಿತ್ತು. ಈ ಮೇರೆಗೆ ಆರೋಪಿತನ ವಿರುದ್ಧ ಹೆಚ್.ಡಿ.ಕೋಟೆ ಠಾಣೆ ಆರಕ್ಷಕ ನಿರೀಕ್ಷಕ ಬಸವರಾಜು ಅವರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಎಂ.ರಮೇಶ ಅವರು ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳನ್ನು ಮತ್ತು ದಾಖಲಾತಿಗಳನ್ನು ಪರಿಗಣಿಸಿ ಪ್ರಕರಣದಲ್ಲಿ ಆರೋಪಿತನು ಕಲಂ 302 ಐಪಿಸಿ ರೀತ್ಯಾ ಅಪರಾಧ ಎಸಗಿರುವುದು ರುಜುವಾತಾಗಿರುವುದಾಗಿ ತೀರ್ಮಾನಿಸಿ ಆರೋಪಿ ಮಂಜುನಾಥ್ ಗೆ ಜೀವಾವಧಿ ಶಿಕ್ಷೆ ಮತ್ತು ರೂ.10,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ.ನಾಗರಾಜ ಅವರು ಸರ್ಕಾರದ ಪರ ವಾದ ಮಂಡಿಸಿದರು.
Key words: Life sentence, Husband, murder, wife, Mysore court