ಮೈಸೂರು: ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ವ್ಯವಹಾರದಲ್ಲಿ ಭಾರೀ ನಷ್ಟ ಅನುಭವಿಸಿದ ಪರಿಣಾಮ ಸಾಲಗಾರರ ಕಾಟಕ್ಕೆ ಹೆದರಿ ಪತ್ನಿಯೊಂದಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಹೊನ್ನೂರು ಕಾವಲ್ ಗ್ರಾಮದಲ್ಲಿ ನಡೆದಿದೆ.
ಕೊಪ್ಪ ನಿವಾಸಿ ಜಯಣ್ಣ ಅವರ ಪುತ್ರ ಸುರೇಶ್ (40) ಹಾಗೂ ಅವರ ಪತ್ನಿ ಪಲ್ಲವಿ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಕಳೆದ ಕೆಲವು ವರ್ಷಗಳಿಂದ ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡಿದ್ದ ಸುರೇಶ್ ಗೆ ರಿಯಲ್ ಎಸ್ಟೇಟ್ ಉದ್ಯಮ ಕೈಹಿಡಿದಿರಲಿಲ್ಲ. ಈ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಇವರು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮುಖ್ಯವಾಗಿ ರಿಯಲ್ ಎಸ್ಟೇಟ್ ಮಾಫಿಯಾಗಳು ದೊಡ್ಡಮಟ್ಟದಲ್ಲಿದ್ದು, ಇದರಿಂದಾಗಿ ಸುರೇಶ್ ಒತ್ತಡಕ್ಕೆ ಸಿಲುಕಿದ್ದರು. ಅಂದು ಕೊಂಡಂತೆ ವ್ಯವಹಾರಗಳು ನಡೆಯದ ಕಾರಣ ನಷ್ಟ ಅನುಭವಿಸಿದ್ದರಿಂದ ಸಾಲದ ಪ್ರಮಾಣ ಹೆಚ್ಚಾಗಿತ್ತಲ್ಲದೆ, ಇದನ್ನು ತೀರಿಸುವುದೇ ಕಷ್ಟವಾಗಿತ್ತು. ಜತೆಗೆ ಸಾಲಕೊಟ್ಟವರು ಬೆನ್ನುಬಿದ್ದಿದ್ದರು. ಇದೆಲ್ಲದರಿಂದ ನೊಂದಿದ್ದ ಸುರೇಶ್ ಪತ್ನಿ ಸಹಿತ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದು ಬಿಟ್ಟಿದ್ದರು.
ಅದರಂತೆ ನೇರವಾಗಿ ದೊಡ್ಡಹೊನ್ನೂರು ಕಾವಲ್ ನ ಜಮೀನಿನ ತೆರಳಿದ ದಂಪತಿ ಡೆತ್ ನೋಟ್ ಬರೆದಿಟ್ಟು ಹಳೆಯ ಖಾಲಿ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವಗಳನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.