ಮೈಸೂರು: ಮೈಸೂರು ಸಿನಿಮಾ ಸೊಸೈಟಿ ಆಯೋಜಿಸಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಉತ್ಸವ ‘ಪರಿದೃಶ್ಯ’ ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಕಿಕ್ಕಿರಿದ ಜನಸಂದಣಿಯೊಂದಿಗೆ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ನಟ,ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಮಾಧ್ಯಮವನ್ನು ಮಾನಸಿಕವಾಗಿ, ಸೈದ್ಧಾಂತಿಕವಾಗಿ ಮನುಷ್ಯರನ್ನು ಬದಲಾಯಿಸಲು ಹೇಗೆಲ್ಲಾ ಬಳಸಿಕೊಳ್ಳಲಾಗುತ್ತಿದೆ ಎನ್ನುವ ವಿಚಾರಗಳನ್ನು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದರು. ಸಿನಿಮಾ ನಿರ್ಮಾಣದ ಹಿಂದಿನ ತಾಂತ್ರಿಕತೆ ಹಾಗೂ ಸಿನಿಮಾ ಮಾಧ್ಯಮದ ಮುಖಾಂತರ ಸಮಾಜಕ್ಕೆ ನಾವು ಏನೆಲ್ಲಾ ಕೊಡಬಹುದು ಎನ್ನುವ ತಿಳುವಳಿಕೆ ಇಂದಿನ ದಿನಗಳಲ್ಲಿ ಎಷ್ಟು ಅಗತ್ಯವಾಗಿದೆ ಮತ್ತು ಭಾರತ ಏಕೆ ಅಂತಹ ತಿಳುವಳಿಕೆಯ ಕೊರತೆ ಎದುರಿಸುತ್ತಿದೆ ಎನ್ನುವ ಬಗ್ಗೆ ನಾವಿಂದು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸಿನಿಮಾ ಮಾಧ್ಯಮ ಮತ್ತು ಅದರ ತಾಂತ್ರಿಕ ಕೌಶಲ್ಯಗಳು ಉದ್ಯೋಗ, ಉದ್ಯಮ, ಶಿಕ್ಷಣ ಸೇರಿದಂತೆ ಎಲ್ಲ ಕಡೆಗಳಲ್ಲೂ ಬಳಸಿಕೊಳ್ಳಬಹುದಾದ ಒಂದು ಅತ್ಯಗತ್ಯವಾದ ಮಾಧ್ಯಮವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ ಎಂದು ಅವರು ಹೇಳಿದರು.
ಕರಾಮುವಿ ಉಪಕುಲಪತಿಗಳಾದ ಶರಣಪ್ಪ ವಿ. ಹಲಸೆ, ಮೈಸೂರು ಸಿನಿಮಾ ಸಸೈಟಿಯ ಅಧ್ಯಕ್ಷರಾದ ಚಂದ್ರಶೇಖರ್ ಜಿ.ಆರ್. ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇಪ್ಪತ್ತು ದೇಶಗಳ ಮುನ್ನೂರಕ್ಕೂ ಹೆಚ್ಚು ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರಗಳು ಸ್ಪರ್ಧಿಸಿರುವ ಈ ಉತ್ಸವದ ಅಂತಿಮ ಹಂತದಲ್ಲಿ ಇಪ್ಪತ್ತೈದು ಪ್ರಶಸ್ತಿಗಳು ಘೋಷಣೆಯಾಗಲಿವೆ.