ಬೆಂಗಳೂರು: ಮೈಸೂರು ರಸ್ತೆಯ ಆರ್.ವಿ. ಕಾಲೇಜು ಸಮೀಪವಿರುವ ಜ್ಞಾನಬೋಧಿನಿ ಶಿಕ್ಷಣ ಸಂಸ್ಥೆಯಲ್ಲಿ ಈ ಬಾರಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು, ಒಂದು ಸಾವಿರಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ 75 ಮೀಟರ್ ಉದ್ದದ ತಿರಂಗಾ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಜ್ಞಾನಬೋಧಿನಿ ಪ್ರೌಢ ಶಾಲೆಯ ಶಿಕ್ಷಕರಾದ ಕೆ.ಜೆ ಚಂದ್ರಶೇಖರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವದ 75 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ದೇಶಾಭಿಮಾನದ ಸಂಕೇತವಾಗಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಮತ್ತು ವಿಶೇಷವಾಗಿ ಆಚರಿಸುತ್ತಿದ್ದಾರೆ. ಸ್ವಚ್ಛ ಭಾರತ- ಹಸಿರು ಭಾರತ ಎಂಬ ಪರಿಕಲ್ಪನೆಯೊಂದಿಗೆ ನಾಲ್ಕು ಕಿಲೋ ಮೀಟರ್ ವಾಕಥಾನ್ ಹಮ್ಮಿಕೊಳ್ಳಲಾಗಿದೆ. ದಿ ಅರ್ಸುಲೈನ್ ಫ್ರಾನ್ಸಿಸ್ಕಾನ್ ವಿದ್ಯಾಸಂಸ್ಥೆಯ ಮೈಸೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿ ಲಲ್ಲಿ ಫೆರ್ನಾಂಡೀಸ್ ಅವರು ಜಾಥಾಗೆ ಚಾಲನೆ ನೀಡಲಿದ್ದು. ಪ್ರತಿಯೊಬ್ಬರಿಗೂ ಪದಕ ಮತ್ತು ಪ್ರಮಾಣಪತ್ರ ನೀಡಲಾಗುವುದು ತಿಳಿಸಿದರು.
ಹಳೆ ಬೇರು ಹೊಸ ಚಿಗುರು ಎಂಬಂತೆ ಹಳೆಯ ಮತ್ತು ಹೊಸ ವಿದ್ಯಾರ್ಥಿ ಸಮೂಹದಿಂದ ರಾಷ್ಟ್ರಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಗಣರಾಜ್ಯೋತ್ಸವವನ್ನು ಸ್ಮರಣೀಯವಾಗಿಸಲು ನಿರ್ಧರಿಸಲಾಗಿದೆ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪೋಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರೂಪ ವಿನಯ್ ಮತ್ತಿತರರ ಗಣ್ಯರು ಭಾಗವಹಿಸುತ್ತಿದ್ದು, ವಿದ್ಯಾರ್ಥಿಗಳಿಂದ ಸಾಮೂಹಿಕ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಸುಮಾರು 750 ಹೂವು ಮತ್ತು ಗಿಡಗಳ ವಿತರಣೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ ಹಳೆಯ ವಿದ್ಯಾರ್ಥಿ ರಾಜೇಶ್ ಚಾವತ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಿಲ್ಲಿ ಶಾಲೆಯ ಶಿಕ್ಷಕರಾದ ರಾಮಪ್ಪ, ಹಿರಿಯ ವಿದ್ಯಾರ್ಥಿಗಳಾದ ತುಕಾರಾಮ್ ಮತ್ತು ಕೆಂಗೇರಿ ಸತ್ಯ, ಬಿ.ವಿ. ಚಂದ್ರಶೇಖರಯ್ಯ ಭಾಗವಹಿಸಿದ್ದರು.