ಪಂಜಾಬ್: ಪಂಜಾಬ್‌ನ ಗಡಿ ಗ್ರಾಮಗಳಿಗೆ ಪಾಕಿಸ್ತಾನ ನಿರಂತರವಾಗಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಪಂಜಾಬ್ ಗಡಿಯಲ್ಲಿ 500ಕ್ಕೂ ಅಧಿಕ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.
ಪಂಜಾಬ್ ಪೊಲೀಸರು ಇದೀಗ ಗಡಿ ಪ್ರದೇಶಗಳಲ್ಲಿ ತನ್ನದೇ ಆದ ಜಾಲವನ್ನು ಬಲಪಡಿಸಲು ಆರಂಭಿಸಿದ್ದಾರೆ. ಅಮೃತಸರ, ಫಿರೋಜ್‌ಪುರ ಮತ್ತು ತರ್ನ್ ತರಣ್ ಗಡಿ ಗ್ರಾಮಗಳ 575 ಸ್ಥಳಗಳಲ್ಲಿ ಈಗ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
ಈಗಾಗಲೇ ಗ್ರಾಮ ರಕ್ಷಣಾ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಗಡಿ ಭಾಗಗಳಿಗೆ ಸಂಬಂಧಿಸಿದ ಯೋಜನೆಗಳಿಗೆ 20 ಕೋಟಿ ರೂ. ತಗುಲಲಿದೆ, ಈ ನಿಟ್ಟಿನಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಈ ಕ್ಯಾಮೆರಾಗಳಲ್ಲಿ ಇಂಟರ್ನೆಟ್ ಸೌಲಭ್ಯವೂ ಇರಲಿದೆ. ಈ ಕ್ಯಾಮೆರಾಗಳನ್ನು ರೆಕಾರ್ಡ್ ಮಾಡಲು ವಿಶೇಷ ನಿಯಂತ್ರಣ ಕೊಠಡಿ ನೋಡಲ್ ಅಧಿಕಾರಿಗಳನ್ನು ಸಹ ನಿಯೋಜಿಸಲಾಗುವುದು.
ಈ ಬಾರಿ ಅಳವಡಿಸಿರುವ ಕ್ಯಾಮೆರಾಗಳು ಸಂಪೂರ್ಣ ಹೈಟೆಕ್ ಆಗಿವೆ. ಈ ಕ್ಯಾಮೆರಾಗಳು ಮುಖ ಪತ್ತೆ ತಂತ್ರಾಂಶ ಮತ್ತು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆಯ ಸೌಲಭ್ಯವನ್ನೂ ಹೊಂದಿವೆ. ಮಾತ್ರವಲ್ಲದೆ ವಾಹನದಲ್ಲಿ ಕುಳಿತ ವ್ಯಕ್ತಿಯ ಮುಖವನ್ನು ಗುರುತಿಸಲು ಸಾಧ್ಯವಾಗುತ್ತದೆ.
ಪಂಜಾಬ್ ಪಾಕಿಸ್ತಾನದೊಂದಿಗೆ ಸುಮಾರು 560 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಈ ಪ್ರದೇಶಗಳಲ್ಲಿ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಪಾಕಿಸ್ತಾನದಿಂದ ಬರುತ್ತಿರುವ ಡ್ರೋನ್‌ಗಳು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿವೆ.