ಚಾಮರಾಜನಗರ: ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರ ನೀತಿಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ ತೆರಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ನೂತನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಭಾವಚಿತ್ರಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯ ಕುಮಾರ್ ಮಾತನಾಡಿ, ರಾಜ್ಯಸಭಾ ಚುನಾವಣೆಯ ಬಳಿಕ ವಿಜಯೋ ತ್ಸವ ಆಚರಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನದ ಪರ ಜೈಕಾರ ಕೂಗಿರುವುದು ವಿಪರ್ಯಾಸ. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ನೀವು ಇರುವುದು ಭಾರತದಲ್ಲಿ ಹೊರತು ಬೇರೆ ದೇಶದಲ್ಲಲ್ಲ. ಕಾಂಗ್ರೆಸ್ ಪಕ್ಷ ದೇಶ, ಹಿಂದೂ ಪರ ಇಲ್ಲ. ನೂತನ ರಾಜ್ಯಸಭಾ ಸದಸ್ಯ ಬೆಂಬಲಿಗ ಪಾಕಿಸ್ತಾನ ಪರ ಜೈಕಾರ ಕೂಗುವುದು ಹಾಗೂ ಡಿ.ಕೆ.ಸುರೇಶ್ ಅವರು ಪ್ರತ್ಯೇಕ ರಾಷ್ಟ್ರ ಬೇಕು ಎಂದು ಹೇಳುವುದು ಖಂಡನೀಯ ಎಂದರು. ನಾಸೀರ್ ಹುಸೇನ್ ಮಾಧ್ಯಮದವರನ್ನು ಅವಮಾನ ಮಾಡಿರುವುದು ಖಂಡನೀಯ. ಪಾಕಿಸ್ತಾನ ಪರ ಜೈಕಾರ ಕೂಗುವವರು ಒಂದು ದಿನ ಪಾಕಿಸ್ತಾನಕ್ಕೆ ಹೋಗಿ ಜೀವನ ಮಾಡಿ ನೋಡಿ ಕಷ್ಟ ಗೊತ್ತಾಗುತ್ತದೆ ಎಂದು ಹೇಳಿದರು.
ಪ್ರತಿಭಟನೆ ವೇಳೆ ಕಾಂಗ್ರೇಸ್ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.