ಮುಂಬೈ: ಅಮಿತಾಬ್ ಬಚ್ಚನ್ ಅವರು ರಿಯಲ್ ಎಸ್ಟೇಟ್ ಮೇಲೆ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಅವರ ಹೆಸರಲ್ಲಿ ಹಲವು ಅಪಾರ್ಟಮೆಂಟ್ಗಳಿವೆ ಆದರೆ ಅವರು ವಾಸಕ್ಕೆ ಬಳಸುವುದು ಎರಡು ಮನೆಗಳು ಮಾತ್ರ. ಒಂದು ಜಲ್ಸಾ ಮತ್ತೊಂದು ಪ್ರತೀಕ್ಷಾ. ಆದರೆ ಇದರಲ್ಲೊಂದು ಮನೆಯನ್ನು ಅಮಿತಾಬ್ ಬಚ್ಚನ್ ತಮ್ಮ ಪುತ್ರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಬಚ್ಚನ್, ಉಡುಗೊರೆಯಾಗಿ ನೀಡಿರುವ ಸ್ಥಳದ ಈಗಿನ ಅಧಿಕೃತ ಮೌಲ್ಯ ಸುಮಾರು 50.63 ಕೋಟಿ ಎನ್ನಲಾಗುತ್ತಿದೆ. ಪ್ರತೀಕ್ಷಾ ನಿರ್ಮಿಸಲಾಗಿರುವ ಸ್ಥಳ ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಖರೀದಿಸಿದ ಮೊದಲ ಆಸ್ತಿಯಾಗಿದೆ.
ಈ ಜಾಗವು ಎರಡು ಭಾಗಗಳಲ್ಲಿ ವಿಭಾಗಗೊಂಡಿದೆ. ಒಂದು ಭಾಗವನ್ನು ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಜಂಟಿಯಾಗಿ ಹೊಂದಿದ್ದರೆ, ಇನ್ನೊಂದು ಭಾಗಕ್ಕೆ ಅಮಿತಾಬ್ ಬಚ್ಚನ್ ಮಾತ್ರವೇ ಮಾಲೀಕರಾಗಿದ್ದರು. ಇದೀಗ ಈ ಎರಡೂ ಭಾಗವನ್ನು ಶ್ವೇತಾ ನಂದಾಗೆ ಉಡುಗೊರೆಯಾಗಿ ಹಸ್ತಾಂತರಿಸಲಾಗಿದೆ.
ಎರಡು ಬಂಗ್ಲೆಯ ಹೊರತಾಗಿ ಮುಂಬೈನಲ್ಲಿ ಮತ್ತೊಂದು ಬಂಗ್ಲೆ ಸಹ ಬಚ್ಚನ್ ಹೆಸರಿನಲ್ಲಿದೆ. ‘ಜನಕ್’ ಹೆಸರಿನ ಆ ಬಂಗ್ಲೆಯನ್ನು ಕಚೇರಿಯ ರೀತಿಯಲ್ಲಿ ಬಚ್ಚನ್ ಮತ್ತು ಅವರ ಕುಟುಂಬ ಬಳಸುತ್ತಿದೆ. ಈ ಮೂರು ಬಂಗ್ಲೆಗಳ ಜೊತೆಗೆ ಕೆಲವು ಅಪಾರ್ಟಮೆಂಟ್ ಫ್ಲಾಟ್ಗಳ ಮೇಲೂ ಬಚ್ಚನ್ ಬಂಡವಾಳ ತೊಡಗಿಸಿದ್ದಾರೆ.