ಪೊಲೀಸ್ ಪೇದೆಯಿಂದ ಬೈಕ್ ಸಂಚಾರ ಮೂಲಕ ಅನ್ಯ ರಾಜ್ಯಗಳಲ್ಲಿ ಸಂವಿಧಾನ ಜಾಗೃತಿ-ಸಂಚಾರಿ ನಿಯಮಗಳ ಅರಿವು

ಶಿವಮೊಗ್ಗ: ಸಂವಿಧಾನಕ್ಕೆ 75 ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಸಂವಿಧಾನದ ಕುರಿತು ಅರಿವು ಮೂಡಿಸಲು ರಾಜ್ಯದಾದ್ಯಂತ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದ್ದು, ಶಿವಮೊಗ್ಗದ ಪೊಲೀಸ್ ಪೇದೆ ಸತೀಶ್‍ರವರು ದೇಶದ ಹಲವು ರಾಜ್ಯಗಳಿಗೆ ತೆರಳಿ ಬೈಕ್ ಸಂಚಾರದ ಮೂಲಕ ಅರಿವು ಮೂಡಿಸಲು ಹೊರಟಿದ್ದಾರೆ.

ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಜೀಪ್ ಚಾಲಕನಾಗಿರುವ ಕಾನ್ಸ್‍ಟೇಬಲ್ ಸತೀಶ್ ಅವರು ಈ ಮಹತ್ವಪೂರ್ಣ ಕಾರ್ಯದಲ್ಲಿ ತೊಡಗಿದ್ದು ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೈಕ್ ಸವಾರಿ ಆರಂಭಿಸಿ ಸುಮಾರು 4 ಸಾವಿರ ಕಿ.ಲೋ ಮೀಟರ್ ದೂರವನ್ನು ಸಂಚರಿಸಿ ಸಂವಿಧಾನ, ಸಂಚಾರಿ ನಿಯಮ ಸೇರಿದಂತೆ ಹಲವು ವಿಚಾರಗಳ ಕುರಿತು ಜನರಲ್ಲಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಿದ್ದಾರೆ.

ಪ್ರಮುಖವಾಗಿ ಮಾನವ ಕಳ್ಳ ಸಾಗಾಣೆ, ಪೋಕ್ಸೋ ಪ್ರಕರಣ, ನಾಗರೀಕ ಕರ್ತವ್ಯ ಮತ್ತು ಹಕ್ಕು, ಸಂಚಾರ ನಿಯಮ ಪಾಲನೆ, ಬೇಟಿ ಪಡಾವೋ ಬೇಟಿ ಬಚವೋ ಕುರಿತು ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಬೈಕ್ ರೈಡ್ ಆರಂಭಿಸಿದ್ದಾರೆ. ತಮ್ಮ ಸ್ವಂತ ರಾಯಲ್ ಎನ್‍ಫೀಲ್ಡ್ ಬೈಕ್ ನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಚಾರವನ್ನು ಪ್ರಾರಂಭಿಸಿ, ಪ್ರತಿ 50 ಕೀ.ಮಿ ಗಳಲ್ಲಿ ಒಂದು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದ್ದಾರೆ.

ತಮ್ಮ ಜಾಗೃತಿ ಕಾರ್ಯಕ್ರಮವನ್ನು ಸುಮಾರು 15 ದಿನಗಳ ಕಾಲ ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು, ದೇಶ ಪರ್ಯಟನೆ ಮೂಲಕ ಜಾಗೃತಿ ಮೂಡಿಸಲು ಮುಂದಾಗಿರುವುದಾಗಿ ತಿಳಿಸಿದ ಅವರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸಂವಿಧಾನ ಕುರಿತಾದ ಜಾಗೃತಿ ಹಾಗೂ ಪೊಲೀಸ್ ಇಲಾಖೆಯ ಅನೇಕ ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕೈಂಕರ್ಯಕ್ಕೆ ಮುಂದಾಗಿರುವ ಸತೀಶ್‍ರಿಗೆ ಶಿವಮೊಗ್ಗ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ಇವರ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಹಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *