ದೆಹಲಿ: ಅತ್ಯುತ್ತಮ ಸಿನಿಮಾಗಳಿಗೆ ನೀಡಲಾಗುವ ಸರ್ವೋತ್ತಮ ಪ್ರಶಸ್ತಿ ಎಂದು ಆಸ್ಕರ್ ಅನ್ನು ಗುರುತಿಸಲಾಗುತ್ತದೆ. ಹಾಗೆಯೇ ಟಿವಿ ಶೋಗಳಿಗೆ ನೀಡಲಾಗುವ ವಿಶ್ವದ ಸರ್ವೋತ್ತಮ ಪ್ರಶಸ್ತಿಯೆಂದು ಎಮ್ಮಿ ಪ್ರಶಸ್ತಿಯನ್ನು (Emmy Award) ಕರೆಯಲಾಗುತ್ತದೆ. ಬೆರಳೆಣಿಕೆಯ ಭಾರತೀಯರಷ್ಟೆ ಈ ಪ್ರಶಸ್ತಿ ಗೆದ್ದಿದ್ದಾರೆ. ಇದೀಗ ಆ ಪಟ್ಟಿಗೆ ಭಾರತದ ಜನಪ್ರಿಯ ಕಮಿಡಿಯನ್ ವೀರ್ ದಾಸ್ ಹೊಸ ಸೇರ್ಪಡೆಯಾಗಿದ್ದಾರೆ.
ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿರುವ ವೀರ್ ದಾಸ್ರ ಕಾಮಿಡಿ ಸ್ಪೆಷಲ್ ‘ವೀರ್ ದಾಸ್; ಲ್ಯಾಂಡಿಂಗ್’ ಎಮ್ಮಿಯ ಯೂನಿಕ್ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪ್ರಶಸ್ತಿಯನ್ನು ‘ಡೆರ್ರಿ ಗರ್ಲ್ಸ್-ಸೀಸನ್ 3’ ಜೊತೆಗೆ ಹಂಚಿಕೊಳ್ಳಲಾಗಿದೆ. ‘ವೀರ್ ದಾಸ್; ಲ್ಯಾಂಡಿಂಗ್’ ಹಾಗೂ ‘ಡೆರ್ರಿ ಗರ್ಲ್ಸ್-ಸೀಸನ್ 3’ ಎರಡೂ ಶೋಗಳಿಗೆ ಜಂಟಿಯಾಗಿ ಪ್ರಶಸ್ತಿಯನ್ನು ನೀಡಲಾಗಿದೆ.
ಇದು ಅವರ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ. ವೀರ್ ದಾಸ್ ಭಾರತದ ಜನಪ್ರಿಯ ಕಮಿಡಿಯನ್. ಅವರು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ತುಂಬಿದ ಗೃಹಗಳ ಕಾಮಿಡಿ ಶೋಗಳನ್ನು ನೀಡಿದ್ದಾರೆ. ಅವರ ಕೆಲವು ಶೋಗಳು ವಿವಾದಕ್ಕೆ ಕಾರಣವಾಗಿದ್ದೂ ಸಹ ಇದೆ. ಇನ್ನು ವೀರ್ ದಾಸ್ ಮಾತ್ರವೇ ಅಲ್ಲದೆ ಭಾರತೀಯ ಟಿವಿ ಜಗತ್ತಿನ ರಾಣಿ ಎಂದೇ ಕರೆಯಲಾಗುವ ಏಕ್ತಾ ಕಪೂರ್ಗೂ ಪ್ರಶಸ್ತಿ ಲಭಿಸಿದೆ.