ಹುಬ್ಬಳ್ಳಿ: ಫ್ಲೈಓವರ್ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್‌ಐ ನಾಭಿರಾಜ್ ದಯಣ್ಣವರ (59) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸೆಪ್ಟೆಂಬರ್ 10ರಂದು ಕೋರ್ಟ್ ವೃತ್ತದ ಬಳಿ ಕರ್ತವ್ಯದ ವೇಳೆ ಫ್ಲೈಓವರ್ ಕಾಮಗಾರಿಯ ರಾಡ್ ಬಿದ್ದು ಎಎಸ್‌ಐ ನಾಭಿರಾಜ್ ದಯಣ್ಣವರ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು (ಸೆ.15) ಚಿಕಿತ್ಸೆ ಫಲಿಸದೆ ಎಎಸ್‌ಐ ನಾಭಿರಾಜ್ ದಯಣ್ಣವರ ಕೊನೆಯುಸಿರೆಳೆದಿದ್ದಾರೆ.
ಗುತ್ತಿಗೆದಾರರ ನಿರ್ಲಕ್ಷ್ಯ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ಝಂಡು ಕನ್ಸ್ಟ್ರಕ್ಷನ್ ನಿರ್ದೇಶಕರಾದ ರಾಮ್‌ಕುಮಾರ್, ಮೋಹಿತ್ ಮತ್ತು ಮನುದೀಪ್, ಯೋಜನಾ ನಿರ್ದೇಶಕ, ಎಂಜಿನಿಯರ್, ಸುರಕ್ಷತಾ ಅಧಿಕಾರಿ, ಕ್ರೇನ್ ಆಪರೇಟರ್ ಮತ್ತು ಕಾರ್ಮಿಕರ ವಿರುದ್ಧ ಎಎಸ್‌ಐ ಪುತ್ರ ರುಷಭ್ ದೂರು ದಾಖಲಿಸಿದ್ದಾರೆ.
ಎಎಸ್‌ಐ ನಾಭಿರಾಜ್ ದಯಣ್ಣವರ ಗುಣಮುಖರಾಗಲು ವೈದ್ಯರು ಸಾಕಷ್ಟು ಮಾಡಿದರು. ಆದರೆ, ಈ ತರಹ ಆಗಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಎಸ್‌ಐ ನಾಭಿರಾಜ್ ದಯಣ್ಣವರ ಕುಟುಂಬಸ್ಥರನ್ನು ಭೇಟಿ ಮಾಡಿದ್ದೇನೆ. ಕರ್ನಾಟಕದಲ್ಲಿ ಎಲ್ಲೆಲ್ಲಿ ಕಾಮಗಾರಿ ನಡೆಯುತ್ತಿದೆ, ಅಲ್ಲಿ ಗುತ್ತಿಗೆದಾರರು ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.