ಉಡುಪಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಚುನಾವಣಾ ಹೊಸ್ತಿಲಲ್ಲಿ ಮತದಾರರ ಓಲೈಕೆಗಾಗಿ ಯಾವುದೇ ಉಚಿತ ಭಾಗ್ಯಗಳನ್ನೂ ಘೋಷಿಸದೆ ಆರ್ಥಿಕತೆಯಲ್ಲಿ ಬಲಿಷ್ಠ ಭಾರತ ನಿರ್ಮಾಣದ ಸಂಕಲ್ಪಕ್ಕೆ ಈ ಬಾರಿಯ ಬಜೆಟ್ ಮೂಲಕ ಮುನ್ನುಡಿ ಬರೆದಿದ್ದಾರೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ರೈತರು,ಯುವ ಜನತೆ ಹಾಗೂ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಬಡವರ ಕಲ್ಯಾಣವೇ ದೇಶದ ಕಲ್ಯಾಣ ಚಿಂತನೆಯಡಿ ಬಜೆಟ್ ಮಂಡಿಸಿದ್ದಾರೆ. ದೇಶದ ಜನತೆಗೆ ತೆರಿಗೆಯ ಹೊರೆ ಹೇರದೆ ಜಿ ಎಸ್ ಟಿ ಸಂಗ್ರಹಣೆಯಲ್ಲಿ ಗಣನೀಯ ಹೆಚ್ಚಳ ದಾಖಲಿಸುವ ಮೂಲಕ ಆರ್ಥಿಕತೆಗೆ ವಿಶೇಷ ಶಕ್ತಿ ತುಂಬುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.
ಮೀನುಗಾರಿಕೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2248 ಕೋಟಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ 75000 ಕೋಟಿ ಮೀಸಲು, ರೈಲ್ವೇ ಸೇವೆ ಉನ್ನತೀಕರಣಕ್ಕೆ ವಿಶೇಷ ಆದ್ಯತೆ, ಪಿ. ಎಂ. ಆವಾಸ್ ಯೋಜನೆಯಡಿ 2 ಕೋಟಿ ಮನೆ ನಿರ್ಮಾಣ, ಮಹಿಳೆಯರ ಸಬಲೀಕರಣಕ್ಕಾಗಿ ಲಕ್ ಪತಿ ದೀದಿ ಯೋಜನೆ, ಅಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಯೋಜನೆಯಡಿ ಸೇರ್ಪಡೆಗೊಳಿಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಪಾಲಿಗೆ ಆಶಾದಾಯಕ ಬಜೆಟ್ ಮಂಡಿಸಿದೆ ಎಂದು ತಿಳಿಸಿದ್ದಾರೆ.