ಅಯೋಧ್ಯೆ: ಹಲವು ಶತಮಾನಗಳ ಕಾಯುವಿಕೆ ಫಲವಾಗಿ ಇಂದು ಭವ್ಯವಾದ ಶ್ರೀರಾಮಮಂದಿರವು ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚಿನ ಬಾಲರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರುವುದರೊಂದಿಗೆ ಮಂದಿರದ ಉದ್ಘಾಟನೆಯೂ ನಡೆಯಲಿದೆ.
ಪ್ರಧಾನಿ ಮೋದಿ ಅವರ ಉಪಸ್ಥಿತಿಯಲ್ಲಿ 7 ಸಾವಿರ ಅತಿಥಿಗಳು ಈ ದಿವ್ಯ ಘಳಿಗೆಗೆ ಪ್ರತ್ಯಕ್ಷ ಸಾಕ್ಷಿಯಾಗಲಿದ್ದಾರೆ.
ಇಂದು(ಜ.22) ಮುಂಜಾನೆ ಬ್ರಾಹ್ಮೀ ಮುಹೂರ್ತದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಮಧ್ಯಾಹ್ನ 12.20ರಿಂದ 12.45ರ ಅಭಿಜಿನ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನ ವಿಧಿ ಮುಖ್ಯಹಂತಕ್ಕೆ ತಲುಪಲಿದೆ. ಈ ವೇಳೆ ಪ್ರಧಾನಿ ಮೋದಿ ಬಾಲರಾಮನ ವಿಗ್ರಹಕ್ಕೆ ನೇತ್ರೋನ್ಮಿಲನ (ಕಣ್ಣು ತೆರೆಸುವ ಕ್ರಿಯೆ) ಕ್ರಿಯೆಯನ್ನು ನಡೆಸಿಕೊಡಲಿದ್ದಾರೆ. ಅಲ್ಲದೇ ಮೋದಲ ಆರತಿ ಕೂಡ ಪ್ರಧಾನಿಯವರಿಂದಲೇ ನಡೆಯಲಿದೆ.
ಅವರೊಂದಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಮತ್ತು ಪ್ರಧಾನ ಅರ್ಚಕರು ಮಾತ್ರ ಗರ್ಭಗುಡಿಯಲ್ಲಿ ಇರಲಿದ್ದಾರೆ.