ಪ್ರಯಾಗರಾಜ್: 2012ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿಗೆ 6 ತಿಂಗಳ ಜೈಲು ಶಿಕ್ಷೆಯಾಗಿದೆ. ಜೊತೆಗೆ ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.
2012ರ ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕೋರ್ಟ್ನ ನ್ಯಾಯಾಧೀಶ ಅಂಬರೀಶ್ ಕುಮಾರ್ ಶ್ರೀವಾಸ್ತವ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ಶಿಕ್ಷೆ ಪ್ರಕಟವಾದ ಕೆಲವೇ ಹೊತ್ತಲ್ಲಿ ಅವರಿಗೆ ಜಾಮೀನು ಸಿಕ್ಕಿದೆ.
ಈ ಹಿಂದೆ ಜೋಶಿ ಕಾಂಗ್ರೆಸ್ನಲ್ಲಿದ್ದರು. ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದರು. ಫೆಬ್ರವರಿ 17, 2012ರ ಸಂಜೆ ಬಹಿರಂಗ ಚುನಾವಣಾ ಪ್ರಚಾರ ಮುಗಿದ ನಂತರವೂ ರೀಟಾ ಬಹುಗುಣ ಜೋಶಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಬಗ್ಗೆ ವಿರೋಧ ಪಕ್ಷಗಳು ದೂರು ನೀಡಿದ್ದು, ನಂತರ ಪ್ರಕರಣ ದಾಖಲಾಗಿತ್ತು.