ಬಳ್ಳಾರಿ: ಬಾಕಿ ಇರುವ ಬಿಲ್ ಪಾವತಿ ಮಾಡದ ಕಾರಣ ಬಳ್ಳಾರಿ ನಗರದ ಐದು ಇಂದಿರಾ ಕ್ಯಾಂಟೀನ್ಗಳು ಸೇರಿ ಜಿಲ್ಲೆಯಾದ್ಯಂತ 8 ಇಂದಿರಾ ಕ್ಯಾಂಟೀನ್ಗಳು ಬಂದ್ ಆಗಿವೆ.
ಸರ್ಕಾರದಿಂದ 3.38 ಕೋಟಿ ರೂಪಾಯಿ ಬಿಲ್ ಬಾಕಿ ಇರುವುದರಿಂದ ನಿರ್ವಹಣೆ ಸಾಧ್ಯವಾಗದೆ ಕ್ಯಾಂಟೀನ್ಗಳು ಮುಚ್ಚಿವೆ.
ಬಳ್ಳಾರಿ ನಗರದ ಜಿಲ್ಲಾಸ್ಪತ್ರೆ, ವಿಮ್ಸ್, ಮೋತಿ ವೃತ್ತ, ಎಪಿಎಂಸಿ ಆವರಣದ ಕ್ಯಾಂಟೀನ್ಗಳು ಮುಚ್ಚಿವೆ. ಬಳ್ಳಾರಿ ನಗರವೊಂದರಲ್ಲೇ ಸರ್ಕಾರ 3.38 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ.
ಖಾಸಗಿ ಏಜೆನ್ಸಿ ಮೂಲಕ ಇಂದಿರಾ ಕ್ಯಾಂಟೀನ್ಗಳನ್ನು ನಡೆಸಲಾಗುತ್ತಿದೆ. ಇದೀಗ, ಬಿಲ್ ಬಿಡುಗಡೆಯಾಗದ ಕಾರಣ ಕ್ಯಾಂಟೀನ್ ನಡೆಸುವುದು ಕಷ್ಟ ಎಂದು ಖಾಸಗಿ ಏಜೆನ್ಸಿಗಳು ಅವುಗಳನ್ನು ಮುಚ್ಚಿವೆ. ರೇಷನ್, ತರಕಾರಿ, ಗ್ಯಾಸ್, ಸಿಬ್ಬಂದಿ ಸಂಬಳಕ್ಕೂ ಹಣ ಇಲ್ಲದೆ ಕ್ಯಾಂಟೀನ್ಗಳನ್ನು ಬಂದ್ ಮಾಡಲಾಗಿದೆ ಎಂದು ಖಾಸಗಿ ಏಜೆನ್ಸಿಗಳು ತಿಳಿಸಿವೆ.
ಬಳ್ಳಾರಿ ನಗರದಲ್ಲಿ 5, ಸಿರಗುಪ್ಪದಲ್ಲಿ 1, ಕೂಡ್ಲಿಗಿಯಲ್ಲಿ 1, ಸಂಡೂರಿನಲ್ಲಿ 1 ಕ್ಯಾಂಟೀನ್ ಮುಚ್ಚಿವೆ. ಅಂದರೆ, ಜಿಲ್ಲೆಯಾದ್ಯಂತ ಒಟ್ಟು ಎಂಟು ಕ್ಯಾಂಟೀನ್ಗಳು ಬಂದ್ ಆಗಿವೆ. ಇವುಗಳದ್ದೆಲ್ಲ ಸೇರಿ ಒಟ್ಟು ಬಾಕಿ ಇರುವ ಬಿಲ್ ಮೊತ್ತ 4.5 ಕೋಟಿ ರೂ. ಆಗಿದೆ. ಬಾಕಿ ಬಿಲ್ ಪಾವತಿಸುವರಗೆ ಕ್ಯಾಂಟೀನ್ ಮುಚ್ಚಿರುತ್ತೇವೆ ಎಂದು ಕ್ಯಾಂಟೀನ್ ನಿರ್ವಹಣೆ ಎಜೆನ್ಸಿ ತಿಳಿಸಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಿಂದಾಗಿ ಇಂದಿರಾ ಕ್ಯಾಂಟೀನ್ಗಳು ಮುಚ್ಚುವಂತಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.