ಬಿಸಿಎಂ ಹಾಸ್ಟೆಲ್‌ ಗಳ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ: ಸೆ.29ರಂದು ಉದ್ಘಾಟನೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಸೆಪ್ಟಂಬರ್,26,2024 (www.justkannada.in):  ಶೈಕ್ಷಣಿಕವಾಗಿ ಅನುಕೂಲಕರವಾದ ಸೌಲಭ್ಯ ಒದಗಿಸಿಲು ಶ್ರಮಿಸುವ ಜತೆಗೆ ಶೈಕ್ಷಣಿಕ ನಿರಂತರತೆ ಉತ್ತೇಜಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತತ್ವಕ್ಕೆ ಬಂದಿದ್ದು, ಸೆ.29 ರಂದು ಉದ್ಘಾಟನೆಗೊಳ್ಳದೆ.

ಮೈಸೂರು ಜಿಲ್ಲೆಯ ವಿವಿಧ ಬಿಸಿಎಂ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡಿ ಸಾರ್ಥಕ ಜೀವನದತ್ತ ಮುಖ ಮಾಡಿರಿವ ಹಿರಿಯ ವಿದ್ಯಾರ್ಥಿಗಳು ಸಂಘವನ್ನು ಅಸ್ತಿತ್ವಕ್ಕೆ ತಂದಿದ್ದು, ಬಿಸಿಎಂ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಶೈಕ್ಷಣಿಕ ನೆರವು ನೀಡುವ ಉದ್ದೇಶ ಹೊಂದಿದ್ದಾರೆ.

ದೇಶ-ವಿದೇಶಗಳಲ್ಲಿ ನೆಲೆಸಿರುವ 500ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಸಂಘದ ಸದಸ್ಯರಾಗಿದ್ದಾರೆ. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳಾದ ಬಿ.ಶಿವಸ್ವಾಮಿ ಸಂಘದ ಅಧ್ಯಕ್ಷರಾಗಿದ್ದು, ಎಂ.ರಾಮಯ್ಯ ಗೌರವಾಧ್ಯಕ್ಷರಾಗಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್(ಕಾರ್ಯಾಧ್ಯಕ್ಷ), ಹಿರಿಯ ವಕೀಲ ಬಿ.ಪಿ.ರಾಜೇಶ್(ಕಾರ್ಯದರ್ಶಿ), ಜೆ.ಕೆ.ರಮೇಶ್‌ಗೌಡ(ಜಂಟಿ ಕಾರ್ಯದರ್ಶಿ), ಮುಖ್ಯಮಂತ್ರಿಗಳ ವಿಶೇಷ ಮುಖ್ಯಾಧಿಕಾರಿ ಆರ್.ಮಹದೇವ(ಉಪಾಧ್ಯಕ್ಷ), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ರುಕ್ಮಾಂಗದ(ಖಜಾಂಚಿ) ಪದಾಧಿಕಾರಿಗಳಾಗಿದ್ದಾರೆ. ಹಿರಿಯ ವೈದ್ಯರು, ಪೊಲೀಸ್ ಅಧಿಕಾರಿಗಳು, ಐಎಎಸ್, ಕೆಎಎಸ್ ಅಧಿಕಾರಿಗಳು ಸೇರಿದಂತೆ ಅನೇಕರು ಸಂಘದಲ್ಲಿದ್ದಾರೆ.

ಸೆ.29ರಂದು ಬೆಳಗ್ಗೆ 10.30ಕ್ಕೆ ನಗರದ ಕಲಾಮಂದಿರದಲ್ಲಿ ಸಂಘದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಿವರಾಜ ಎಸ್.ತಂಗಡಗಿ, ಶಾಸಕರಾದ ತನ್ವೀರ್ ಸೇಠ್, ಸಿ.ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಕೆ.ಹರೀಶ್‌ಗೌಡ, ದರ್ಶನ್ ಧ್ರುವ ನಾರಾಯಣ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಇದೇ ವೇಳೆ ಜಿಲ್ಲೆಯ ವಿವಿಧ ಬಿಸಿಎಂ ವಿದ್ಯಾರ್ಥಿ ನಿಲಯಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅಡುಗೆ ಸಿಬ್ಬಂದಿ, ನಿವೃತ್ತ ವಾರ್ಡನ್ ಮತ್ತು ಮೇಲ್ವಿಚಾರಕರನ್ನು ಸನ್ಮಾನಿಸಲಾಗುತ್ತದೆ. ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಆಯ್ದ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹ ಧನ ವಿತರಿಸಲಾಗುತ್ತದೆ.

ಸಂಘದ ಉದ್ದೇಶಗಳಿವು:

ಬಿಸಿಎಂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಅವಶ್ಯ ವೇದಿಕೆಗಳನ್ನು ನಿರ್ಮಿಸುವುದು. ವೈಜ್ಞಾನಿಕ ಮತ್ತು ಮಾನವೀಯ ದೃಷ್ಟಿಕೋನ ಬೆಳೆಸಲು ಕಾರ್ಯಕ್ರಮಗಳನ್ನು ರೂಪಿಸುವುದು. ಉಪನ್ಯಾಸಗಳು ಹಾಗೂ ವೇದಿಕೆ ಪ್ರದರ್ಶನಗಳನ್ನು ನೀಡಲು ಹಿರಿಯ ವಿದ್ಯಾರ್ಥಿಗಳನ್ನು ಆಹ್ವಾನಿಸುವುದು. ವಿದ್ಯಾರ್ಥಿನಿಲಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವುದು. ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುವುದು. ಪ್ರಖ್ಯಾತ ವ್ಯಕ್ತಿಗಳಿಂದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಉಪನ್ಯಾಸಗಳನ್ನು ನೀಡಲು ದತ್ತಿ ಸ್ಥಾಪಿಸುವುದು. ವಿದ್ಯಾರ್ಥಿಗಳಿಗಾಗಿ ಹಿರಿಯ ವಿದ್ಯಾರ್ಥಿಗಳಿಂದ ಪುಸ್ತಕಗಳು, ಉಪಕರಣಗಳು, ಶೈಕ್ಷಣಿಕ ಸಾಮಗ್ರಿ ಇತ್ಯಾದಿ ರೂಪದಲ್ಲಿ ದೇಣಿಗೆ ಸಂಗ್ರಹಿಸುವುದು.

ಜಿಲ್ಲಾ ವ್ಯಾಪ್ತಿಯ ಬಿಸಿಎಂ ವಿದ್ಯಾರ್ಥಿ ನಿಲಯಗಳಲ್ಲಿ ಪರಿಸರ ಸಂರಕ್ಷಣೆಗಾಗಿ ಗಿಡ ನೆಡಿಸುವುದು. ಸ್ವಚ್ಛತಾ ಕಾರ್ಯಕ್ರಮ ಮತ್ತು ಆರೋಗ್ಯ ಜಾಗೃತಿ, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ವಿದ್ಯಾರ್ಥಿನಿಲಯಗಳಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳು ಮತ್ತು ಇತರ ವಿಸ್ತರಣಾ ಚಟುವಟಿಕೆಗಳನ್ನು ಆಯೋಜಿಸುವುದು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಅಲ್ಲದೆ ವಿದ್ಯಾರ್ಥಿ ನಿಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಇಲಾಖೆ ಸಹಕಾರದೊಂದಿಗೆ ಸ್ಥಾಪಿಸುವ ಉದ್ದೇಶಗಳನ್ನು ಹೊಂದಿರುವುದಾಗಿ ಸಂಘದ ಕಾರ್ಯದರ್ಶಿ ಬಿ.ಪಿ.ರಾಜೇಶ್ ತಿಳಿಸಿದ್ದಾರೆ.

Key words: BCM, Hostels, Senior Students, Association, Inauguration, 29th September

Font Awesome Icons

Leave a Reply

Your email address will not be published. Required fields are marked *