ಬೇಸಿಗೆ ಕಾಲ ಬಂದಾಗಲೆಲ್ಲ ತ್ವಚೆಯ ಬಗ್ಗೆ ಚಿಂತೆ ಕಾಡುತ್ತದೆ. ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ತ್ವಚೆಯನ್ನು ಕಾಪಾಡಿಕೊಳ್ಳುವುದು ಹೆಣ್ಣು ಮಕ್ಕಳಿಗೊಂದು ಸವಾಲ್ ಎಂದರೂ ತಪ್ಪಾಗಲಾರದು.
ಇಂತಹ ಸಂದರ್ಭದಲ್ಲಿ ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಕಾಳಜಿ ವಹಿಸಿದರೆ ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದಷ್ಟು ಬಿಸಿಲಿನಿಂದ ದೂರವಿದ್ದುಕೊಂಡೇ ಬದುಕುವುದನ್ನು ಕಲಿಯಬೇಕಾಗುತ್ತದೆ. ಒಂದೆಡೆ ಚರ್ಮವನ್ನು ಮಾತ್ರ ಕಾಪಾಡಿಕೊಳ್ಳುವುದಲ್ಲದೆ ಆರೋಗ್ಯದ ಕಡೆಗೂ ಗಮನಹರಿಸಬೇಕಾಗುತ್ತದೆ.
ಬೇಸಿಗೆಯಲ್ಲಿ ಸೂರ್ಯನ ಶಾಖವೂ ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಜತೆಗೆ ಹೆಚ್ಚು ದೇಹ ಬೆವರುವುದರಿಂದ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಹೋದರೆ ದುರ್ವಾಸನೆ ಬರುವ ಸಾಧ್ಯತೆ ಇರುತ್ತದೆ.
ಚರ್ಮವು ಆರೋಗ್ಯವಾಗಿರಲು ಸೂರ್ಯನ ಕಿರಣಗಳ ಅಗತ್ಯವಿದೆಯಾದರೂ, ಅತಿಯಾದ ಸೂರ್ಯನ ಶಾಖ ಚರ್ಮಕ್ಕೆ ಹಾನಿ ಮಾಡುತ್ತದೆ. ಸೂರ್ಯ ಕಿರಣದಲ್ಲಿನ ಅತಿನೇರಳೆ ಬಣ್ಣದ ಕಿರಣಗಳು ಚರ್ಮವನ್ನು ಒಣಗುವಂತೆ ಮಾಡಿ ಮೃದುತ್ವವನ್ನು ನಾಶಮಾಡುತ್ತದೆ. ಸೂರ್ಯ ಕಿರಣಗಳಿಂದಾಗಿ ಉಂಟಾಗುವ ರೆಡಿಯೇಷನ್ನಿಂದಲೂ ಸಹ ಚರ್ಮವು ತನ್ನ ತೇವವನ್ನು ಕಳೆದುಕೊಂಡು ಕಳಾಹೀನವಾಗಿ ಬಿಡುತ್ತದೆ.
ಪೌಷ್ಟಿಕಾಂಶವುಳ್ಳ ಆಹಾರ, ಕಾಯಿಪಲ್ಯೆ, ತರಕಾರಿಗಳನ್ನು ಆಹಾರವಾಗಿ ಸೇವಿಸಬೇಕು. ಕೇಕ್, ತಂಪು ಪಾನೀಯಗಳು, ಸಿಹಿತಿಂಡಿಗಳು, ಮಸಾಲೆಯ ಪದಾರ್ಥಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು. ಚರ್ಮಕ್ಕೆ ಹೊಂದಿಕೊಳ್ಳುವ ಸಾಬೂನನ್ನು ಅರಿತು ಅದನ್ನೇ ಉಪಯೋಗಿಸಬೇಕು. ಕೃತಕ ಸೌಂದರ್ಯ ವರ್ಧಕಗಳಿಂದ ಆದಷ್ಟು ದೂರವಿರಬೇಕು. ಬಾದಾಮಿ ಎಣ್ಣೆಯಿಂದ ಚರ್ಮವನ್ನು ಮೃದುವಾಗಿ ಮಾಲೀಸ್ ಮಾಡಬೇಕು.
ಧರಿಸುವ ಉಡುಪುಗಳು ಬಿಗಿಯಾಗಿರದಂತೆ ನೋಡಿಕೊಳ್ಳಿ, ಕಾಟನ್ ಬಟ್ಟೆಗೆ ಹೆಚ್ಚಿನ ಆದ್ಯತೆ ನೀಡಿ, ಚರ್ಮದ ಮೇಲಿನ ಜಿಡ್ಡು ತೆಗೆದು ನುಣುಪಾಗಿಸಲು ಸೌತೆಕಾಯಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಚರ್ಮದ ಮೇಲೆ ಇಟ್ಟುಕೊಳ್ಳಿ. ಧರಿಸುವ ಉಡುಪು ಶುಭ್ರವಾಗಿರಲಿ.
ಹಣ್ಣು-ತರಕಾರಿ ಸೇವನೆಗೆ ಆದ್ಯತೆ ನೀಡಿ, ಎಳನೀರು ಧಾರಾಳವಾಗಿ ಸೇವಿಸಿ, ಕಲ್ಲಂಗಡಿ, ಸೌತೆಕಾಯಿ, ಬಾಳೆಹಣ್ಣು ಮುಂತಾದವುಗಳಿಗೆ ಹೆಚ್ಚಿನ ಆದ್ಯತೆ ನೀಡಿ, ತಾಜಾ ಸೊಪ್ಪು, ಹಸಿಬಟಾಣಿ, ಟೊಮೇಟೋದೊಂದಿಗೆ ಕೂಡಿದ ತರಕಾರಿ ಸಲಾಡ್ ಸೇವನೆ ಮಾಡಿ. ಮಸಾಲೆ ಪದಾರ್ಥಗಳನ್ನು ಮತ್ತು ಜಂಕ್ ಫುಡ್ ಗಳನ್ನು ಕಡಿಮೆ ಮಾಡಿ.
ಬಿಸಿಲೆಗೆ ಹೊರಗೆ ಹೋಗಬೇಕಾದ ವೇಳೆ ಛತ್ರಿ ಬಳಸಿ, ಜತೆಯಲ್ಲಿ ನೀರಿನ ಬಾಟಲಿ ಇಟ್ಟುಕೊಳ್ಳಿ, ಕೆಲವೊಂದು ಕ್ರಮಗಳನ್ನು ನಾವೇ ಅಳವಡಿಸಿಕೊಳ್ಳುವ ಮೂಲಕ ಬಿಸಿಲಿನಿಂದ ತಪ್ಪಿಸಿಕೊಂಡು ಚರ್ಮವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ.