ಔರಾದ್: ಪಟ್ಟಣದಲ್ಲಿ ಅತಿಕ್ರಮಣ ಆಗಿದೆ ಎನ್ನಲಾದ ಸ್ಮಶಾನ ಭೂಮಿ ತೆರವಿಗಾಗಿ ಆಗ್ರಹಿಸಿ ನಾಗರಿಕರು ಸೋಮವಾರ ಇಲ್ಲಿಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಅಣಕು ಶವ ಇಟ್ಟು ಪ್ರತಿಭಟನೆ ನಡೆಸಿದರು.
ಲಿಂಗಾಯತ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ, ನಾಗರಿಕ ಸಂಘರ್ಷ ಸಮಿತಿ, ಭಾರತ ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 4ನೇ ದಿನಕ್ಕೆ ತಲುಪಿದೆ.
ಈ ನಡುವೆ ತಮ್ಮ ಬೇಡಿಕೆಗೆ ಸ್ಪಂದನೆ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು ಅಣಕು ಇಟ್ಟು ಬೊಬ್ಬೆ ಹಾಕಿದರು.
ಸ್ಮಶಾನ ಭೂಮಿ ಅತಿಕ್ರಮಣವಾಗಿರುವುದರಿಂದ ಹಿಂದೂ ಸಮಾಜ ಬಾಂಧವರಿಗೆ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಈ ವಿಷಯದಲ್ಲಿ ನಿರಂತರ ಬೇಡಿಕೆ, ಹೋರಾಟ ನಡೆಸಿದರೂ ನಮಗೆ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ಈ ಬಾರಿ ನಮ್ಮ ಬೇಡಿಕೆ ಈಡೇರುವ ತನಕ ನಾವು ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ. ಬದಲಾಗಿ ತೀವ್ರಗೊಳಿಸುತ್ತೇವೆ ಧರಣಿ ನಿರತ ಶರಣಪ್ಪ ಪಾಟೀಲ, ಶಂಕು ನಿಷ್ಪತೆ ಹೇಳಿದರು.
ಪಟ್ಟಣದ ಸರ್ವೆ ನಂಬರ್ 95ರ ಸ್ಮಶಾನ ಭೂಮಿ ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ಆಗಿರುವ ಮ್ಯುಟೇಶನ್ ರದ್ದು ಮಾಡಿ ಅಲ್ಲಿಯ ಕಟ್ಟಡ ತೆರವುಗೊಳಿಸಬೇಕು. ಇಡೀ ಸ್ಮಶಾನ ಭೂಮಿಗೆ ತಂತಿ ಬೇಲಿ ಹಾಕಿ ಮೂಲ ಸೌಲಭ್ಯ ಕಲ್ಪಿಸಬೇಕು. ಪಟ್ಟಣದಲ್ಲಿ ಜನಸಂಖ್ಯೆ ಜಾಸ್ತಿಯಾಗಿರುವುದರಿಂದ ಊರು ಹೊರಗೆ ಸರ್ಕಾರದಿಂದಲೇ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನಾಗಯ್ಯ ಹಿರೇಮಠ, ಮುಖ್ಯಾಧಿಕಾರಿ ಸ್ವಾಮಿದಾಸ ನಿಮ್ಮ ಬೇಡಿಕೆಯಂತೆ ಅತಿಕ್ರಮವಾದ ಸ್ಮಶಾನ ಭೂಮಿ ಮ್ಯುಟೇಶನ್ ರದ್ದು ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಹಿಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಬಸವರಾಜ ಶೆಟಕಾರ, ವೀರೇಶ ಅಲ್ಮಾಜೆ, ಅನೀಲ ಬೇಲೂರೆ, ಅನೀಲ ನಿರ್ಮಳೆ, ವೀರೇಶ ಕನಕೆ, ಅಮಿತ ಶಿವಪೂಜೆ, ವಿವೇಕ ನಿರ್ಮಳೆ, ಸಿದ್ದು ಚಾರೆ, ರಜನಿಕಾಂತ ದಾಮಾ ಪ್ರತಿಭಟನೆಯಲ್ಲಿ ಇದ್ದರು.