ಬೀದರ್: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ಮಧ್ಯೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರರು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಮಲನಗರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ ಡಿಗ್ಗಿ ಗ್ರಾಮ ಪಂಚಾಯಿತಿ ಸದಸ್ಯ ವೀರೇಶ ಕಲ್ಲಪ್ಪಾ ಲೋಹರೆ (34) ಹಾಗೂ ಅಭಿಷೇಕ್ ವೀರೇಂದ್ರ ಧಬಾಲೆ (25) ಮೃತಪಟ್ಟವರು.
ಉದಗೀರ್ ಪಟ್ಟಣದಿಂದ ಸ್ವಗ್ರಾಮಕ್ಕೆ ತೆರಳುವ ವೇಳೆ ಎದುರಿನಿಂದ ಬಂದ ಸಾರಿಗೆ ಸಂಸ್ಥೆಯ ಬಸ್ಗೆ ಮುಖಾಮುಖಿ ಢಿಕ್ಕಿಯಾಗಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡ ಗಣೇಶ ಸತೀಶ ಭಾಡಸಿಂಗೆ ಎಂಬುವರಿಗೆ ಕಮಲನಗರ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಗುರುನಾನಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಭಾಲ್ಕಿ ಡಿವೈಎಸ್ ಶಿವಾನಂದ್ ಪವಾಡಶೆಟ್ಟಿ ಹಾಗೂ ಕಮಾಲನಗರ ಪಿಎಸ್ಐ ಆಶಾ ರಾಥೋಡ್ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.