ಬೀದರ್: ಮಾವಿನ ಮರಗಳಲ್ಲಿ ಹೂವಿನ ರಾಶಿ, ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಬೆಳೆಗಾರರು

ಹುಲಸೂರ: ತಾಲ್ಲೂಕಿನ ಹಳ್ಳಿಗಳಲ್ಲೀಗ ಮೈತುಂಬ ಹೂವುಗಳನ್ನು ಹೊತ್ತು ನಿಂತ ಮಾವಿನ ಮರಗಳೇ ಕಾಣುತ್ತಿವೆ. ಕಳೆದ ವರ್ಷಕ್ಕಿಂತ ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಹೂ ಬಿಟ್ಟಿದ್ದು, ಬೆಳೆಗಾರರು ಉತ್ತಮ ಫಸಲು ದೊರೆಯುವ ನಿರೀಕ್ಷೆಯಲ್ಲಿದ್ದಾರೆ.

ಮಾವಿನ ಫಸಲು ಒಂದು ವರ್ಷ ಹೆಚ್ಚಿದ್ದರೆ ಇನ್ನೊಂದು ವರ್ಷ ಕಡಿಮೆ ಇರುತ್ತದೆ. ಕಳೆದ ವರ್ಷ ಫಸಲು ಕಡಿಮೆ ಇತ್ತು. ಹಾಗಾಗೀ ಈ ವರ್ಷ ತಾಲ್ಲೂಕಿನಲ್ಲಿ ಹೆಚ್ಚಿನ ಇಳುವರಿ ದೊರೆಯುವ ನಿರೀಕ್ಷೆ ಇದೆ. ಹುಲಸೂರ ತಾಲ್ಲೂಕು ವ್ಯಾಪ್ತಿಯಲ್ಲಿ ಅಂದಾಜು 238 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ತಿಂಗಳ ಆರಂಭದಿಂದಲೇ ಮರಗಳನ್ನು ಹೂವು ಆವರಿಸಿಕೊಂಡಿದ್ದು ಕೆಲವೆಡೆ ಸಣ್ಣ ಕಾಯಿಗಳು ಮೂಡಲಾರಂಭಿಸಿವೆ.

‘ಹೋದ ವರ್ಷ ಹೂವೇ ಬಿಡದ ಮರಗಳೂ ಈ ಬಾರಿ ಚಿಗುರೊಡೆದು, ಹೂವುಗಳು ಕಾಣಿಸಿಕೊಂಡಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲ ಮಾವಿನ ಮರಗಳಲ್ಲಿ ಹೂವಿನ ಪ್ರಮಾಣ ದ್ವಿಗುಣಗೊಂಡಿದೆ. ಶೇ96ರಷ್ಟು ಮರಗಳಲ್ಲಿ ಹೂವು ತುಂಬಿರುವುದರಿಂದ ಉತ್ತಮ ಬೆಳೆ ನಿರೀಕ್ಷಿಸಬಹುದು. ಆದರೂ ಮಳೆ ಬಂದರೆ ತೊಂದರೆ ಆಗಬಹುದು’ ಎನ್ನುತ್ತಾರೆ

ಸದ್ಯದ ಪರಿಸ್ಥಿತಿಯಲ್ಲಿ ಎಲ್ಲೆಡೆ ಮಾವಿನ ಗಿಡಕ್ಕೆ ಯಾವುದೇ ರೋಗವಿಲ್ಲದೆ ಅಧಿಕ ಹೂವುಗಳಿಂದ ಕೂಡಿದೆ. ಮಾವು ಬೆಳೆಗಾರರು ಮಾವಿನ ಹೂ ರಕ್ಷಣೆಗೆ ಪೂರಕವಾಗಿ ಕೈಗೊಳ್ಳುವ ಕ್ರಮಗಳ ಜತೆಗೆ, ಪರಾಗ ಸ್ಪರ್ಶ ನಡೆಯುವ ಸಮಯದಲ್ಲಿ ಯಾವುದೇ ಔಷಧ ಸಿಂಪಡಣೆ ಮಾಡಬಾರದು. ಈ ಹಂತದಲ್ಲಿ ಔಷಧ ಸಿಂಪಡಣೆ ಮಾಡುವುದರಿಂದ ಪರಾಗ ಸ್ಪರ್ಶಕ್ಕೆ ಸಹಕರಿಸುವ ಕೀಟಗಳು ಸಾಯುತ್ತವೆ. ಪರಾಗಸ್ಪರ್ಶ ಪರಿಣಾಮಕಾರಿಯಾಗಿ ನಡೆಯದಿದ್ದರೆ ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಕಟ್ಟುವುದಿಲ್ಲ’ ಎನ್ನುತ್ತಾರೆ ಬೆಳೆಗಾರರು.

ರೈತರಿಗೆ ಹೂ ರಕ್ಷಣೆ ಸವಾಲು:

‘ಮಾವು ಬೆಳೆಗಾರರು ಮಾವಿನ ಹೂ ರಕ್ಷಣೆಗೆ ಅಗತ್ಯವಾದ ಕ್ರಮಕೈಗೊಳ್ಳಬೇಕು. ಹೂವನ್ನು ಸಮರ್ಪಕವಾಗಿ ಉಳಿಸಿಕೊಂಡರೆ ಮಾತ್ರ ಉತ್ತಮ ಫಸಲು ಪಡೆಯಲು ಸಾಧ್ಯವಾಗುತ್ತದೆ. ಈಗಾಗಲೇ ಶೇ 96ರಷ್ಟು ಮಾವಿನ ಮರಗಳಲ್ಲಿ ಹೂ ಕಾಣಿಸಿಕೊಂಡಿವೆ. ಜನವರಿ ಮತ್ತು ಫೆಬ್ರುವರಿ ಅಂತ್ಯದೊಳಗೆ ಸಂಪೂರ್ಣ ಹೂ ಅರಳುವ ಸಾಧ್ಯತೆಯಿದೆ. ಮಾವಿನ ಮರಗಳಲ್ಲಿ ಬಿಟ್ಟಿರುವ ಹೂ ರಕ್ಷಿಸಿಕೊಳ್ಳಲು ಮತ್ತು ಹೂ ಇನ್ನೂ ಬಿಡದ ಮಾವಿನ ಮರಗಳಿಗೆ ಹೂ ಬಿಡಲು ವಾರಕ್ಕೊಮ್ಮೆ ಔಷಧಿ ಸಿಂಪಡಿಸುವ ಕಾರ್ಯದಲ್ಲಿ ಬೆಳೆಗಾರರು ತೊಡಗಬೇಕು’ ಎಂದರು.

‘ಮಾವಿನ ಹೂವಿಗೆ ಜಿಗಿ ಹುಳುವಿನ ಕಾಟ ಕಂಡುಬಂದರೆ, ಇದು ಹೂ ಗೊಂಚಲಿನ ರಸ ಹೀರುತ್ತದೆ. ಇದರಿಂದಾಗಿ ಹೂಗಳು ಒಣಗಿ ಉದುರುತ್ತವೆ. ಅವು ಸ್ರವಿಸುವ ಅಂಟು ಪದಾರ್ಥದಿಂದಾಗಿ ಹೂ ಗೊಂಚಲಿನಲ್ಲಿ ಬೂಸ್ಪ್ ಕಾಣಿಸಿಕೊಳ್ಳುತ್ತದೆ. ಜಿಗಿ ಹುಳು ನಿಯಂತ್ರಣಕ್ಕೆ 4 ಗ್ರಾಂ ಕಾರ್ಬಾರಿಲ್ ಅಥವಾ 2 ಮಿ.ಲೀ ಮೆಲಾಥಿಯಾನ್ 50 ಇಸಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಸುಮಾ ಯಾದವ ಸಲಹೆ ನೀಡಿದರು.

Font Awesome Icons

Leave a Reply

Your email address will not be published. Required fields are marked *