ಔರಾದ: ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜನವರಿ 26ರಂದು ಔರಾದ(ಬಿ) ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡ ಸ್ಥಳವನ್ನು ವೀಕ್ಷಿಸಿದರು.
ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸಂಚರಿಸಿದ ಶಾಸಕರು, ಯೋಜನೆಯ ಕುರಿತು ಮತ್ತು ಕಟ್ಟಡ ನೀಲನಕ್ಷೆಯ ಬಗ್ಗೆ ವಿವರಣೆ ಪಡೆದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವೀರಶೆಟ್ಟಿ ರಾಠೋಡ್ ಅವರು ಕಟ್ಟಡ ನಿರ್ಮಾಣ ಸ್ಥಳ ಒಳಗೊಂಡು ಯೋಜನೆಯ ಕುರಿತಂತೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಟ್ಟಡ ನಿರ್ಮಿಸಬೇಕಿರುವ ಸ್ಥಳದಲ್ಲಿರುವ ಹಾಳು ಗೋಡೆಗಳನ್ನು ಕಂಡು ಇಲ್ಲಿರುವ ಎಲ್ಲ ಹಳೆಯ ಗೋಡೆಗಳನ್ನು ನೆಲಸಮಗೊಳಿಸಬೇಕು ಮುಳ್ಳು ಕಂಟಿಗಳು ಮತ್ತು ಕಸವನ್ನು ತೆಗೆದು ಕೋರ್ಟ್ ನಿರ್ಮಾಣವಾಗುವ ಪ್ರದೇಶವನ್ನು ಸ್ವಚ್ಛಗೊಳಿಸುವ ಕೆಲಸವನ್ನು ತುರ್ತಾಗಿ ಆರಂಭಿಸಬೇಕು. ನಾನು ಮತ್ತೊಮ್ಮೆ ಭೇಟಿ ನೀಡುತ್ತೇನೆ. ಅದಕ್ಕಿಂತ ಮುಂಚಿತವಾಗಿ ಕೋರ್ಟ್ ಕಟ್ಟಡ ಸ್ಥಳ ಸ್ವಚ್ಛತೆಯಿಂದ ಕೂಡಿರಬೇಕೆಂದು ನಿರ್ದೇಶನ ನೀಡಿದರು.
ಔರಾದ(ಬಿ) ಪಟ್ಟಣದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳಾಗಿವೆ. ಕೋರ್ಟ್ ಕಟ್ಟಡ ಮಾತ್ರ ಹಳೆಯದಾಗಿತ್ತು. ಹೊಸ ಕಟ್ಟಡ ನಿರ್ಮಿಸಬೇಕೆಂಬುದು ನ್ಯಾಯವಾದಿಗಳು ಸೇರಿದಂತೆ ಕ್ಷೇತ್ರದ ಜನತೆಯ ಬೇಡಿಕೆಯಾಗಿತ್ತು. ಪ್ರತಿಯೊಂದಕ್ಕೂ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ನಾನು ಸಚಿವನಾಗಿದ್ದಾಗ ಮುಖ್ಯಮಂತ್ರಿಗಳು ಹಾಗೂ ಸಂಬAಧಿಸಿದ ಸಚಿವರ ಮೇಲೆ ಒತ್ತಡ ತಂದು ಕಟ್ಟಡ ನಿರ್ಮಿಸುವ ಯೋಜನೆಗೆ ಮಂಜೂರಾತಿ ಪಡೆದು ಅನುದಾನ ಬಿಡುಗಡೆ ಮಾಡಿಸಿದ್ದೆ. ಇದೀಗ ಟೆಂಡರ್ ಪ್ರಕ್ರಿಯೆಯೂ ಮುಗಿದಿದ್ದು, ಕೆಲವೇ ದಿನಗಳಲ್ಲಿ ಕಟ್ಟಡ ನಿರ್ಮಾಣ ಕೆಲಸ ಆರಂಭವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಡೊಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ವೀರಣ್ಣ ಕಾರಬಾರಿ, ಸೂರ್ಯಕಾಂತ ಅಲ್ಮಾಜೆ, ರಮೇಶ ಬಿರಾದಾರ, ಅಶೋಕ ಅಲ್ಮಾಜೆ, ಮಹಾದೇವ ಅಲ್ಮಾಜೆ, ಕೇರಬಾ ಪವಾರ, ಪ್ರಕಾಶ ಅಲ್ಮಾಜೆ, ವಕೀಲರಾದ ಸಂದೀಪ ಮೇತ್ರೆ, ಅನೀಲ ವಾಡೆಕರ್ ಹಾಗೂ ಇತರರು ಉಪಸ್ಥಿತರಿದ್ದರು.