ಬೆಟ್ಟದ ಬಳಗದಿಂದ ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ

ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ನಂದಿ ವಿಗ್ರಹಕ್ಕೆ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ನಗರದ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾಭಿಷೇಕವನ್ನು ವಿಜೃಂಭಣೆಯಿಂದ ನಡೆಸಲಾಯಿತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹಾಗೂ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿಯ ಸಮ್ಮುಖದಲ್ಲಿ ಬೆಳಗ್ಗೆ 8.30ಕ್ಕೆ ಆರಂಭವಾದ ಅಭಿಷೇಕ ಕಾರ್ಯಕ್ಕೆ ನೂರಾರು ಜನರು ಸಾಕ್ಷಿಯಾದರು. ಮಹಾಭಿಷೇಕದ ಸಂದರ್ಭ ನಂದಿ ವಿಗ್ರಹ ಹಳದಿ, ಕೆಂಪು, ಬಿಳಿ ಸೇರಿದಂತೆ ನಾನಾ ಬಣ್ಣಗಳಲ್ಲಿ ಕಂಗೊಳಿಸಿತು. ಭಕ್ತರು ನಂದಿಗೆ ಕೈ ಮುಗಿದು ಧನ್ಯತಾ ಭಾವ ಮೆರೆದರು.

ಹಾಲು, ಮೊಸರು, ತುಪ್ಪ, ಜೇನುತುಪ್ಪ, ಎಳನೀರು, ಕಬ್ಬಿನ ಹಾಲು, ನಿಂಬೆ, ತೈಲ, ಬಾಳೆಹಣ್ಣು, ದ್ರಾಕ್ಷಿ, ಬೇಲ, ಖರ್ಜೂರ, ಸೌತೆಕಾಯಿ, ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಹೆಸರು ಹಿಟ್ಟು, ದರ್ಬೆ, ಪತ್ರೆ ಹಾಗೂ ಪುಷ್ಪ ಮೊದಲಾದ 32 ದ್ರವ್ಯಗಳಿಂದ ನಂದಿಗೆ ಅಭಿಷೇಕ ಜರಗಿತು. ಗಂಧ ಪಂಚಕಾಭಿಷೇಕ, ಪಂಚಾಮೃತಾಭಿಷೇಕ, ಫಲಪೂಜಾಮೃತ, ರಸಪಂಚಾಮೃತ, ಪಿಷ್ಟ ಪಂಚಕಾಭಿಷೇಕವೂ ನಡೆಯಿತು.

ಪಂಚಾಮೃತ, ಶಾಲ್ಯಾನ್ನ, ರುದ್ರಾಭಿಷೇಕ ಹಾಗೂ ಸುಗಂಧ ದ್ರವ್ಯ ಅಭಿಷೇಕ ಮತ್ತು ಪಂಚಕಲಶ ವಿಸರ್ಜನೆ ನಡೆಯಿತು. ಒಂದೊಂದು ದ್ರವ್ಯದ ಅಭಿಷೇಕದಲ್ಲೂ ವಿವಿಧ ಬಣ್ಣದಲ್ಲಿ ಕಂಗೊಳಿಸಿದ ವಿಗ್ರಹವನ್ನು ಜನರು ಕಣ್ತುಂಬಿಕೊಂಡರು. ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯೂ ನೆರವೇರಿತು.

ಈ ವೇಳೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಹಾರಾಜರ ಕಾಲದಿಂದಲೂ ಕಾರ್ತಿಕ ಮಾಸದಲ್ಲಿ ಇಲ್ಲಿನ ನಂದಿಗೆ ಅಭಿಷೇಕ ನಡೆಯುತ್ತಾ ಬಂದಿದೆ. ಇದೊಂದು ದೈವಿಕ ಕಾರ್ಯವಾಗಿದ್ದು, ಭಕ್ತಿಯ ಜಾಗೃತಿಗೆ, ಪ್ರಸರಣೆಗೆ ಅಗತ್ಯ. ಬೆಟ್ಟದ ಬಳಗದ ಸದಸ್ಯರು ಮತ್ತು ಭಕ್ತಾದಿಗಳು ಅಭಿಷೇಕವನ್ನು ಉತ್ತಮವಾಗಿ ನೆರವೇರಿಸಿದ್ದು, ಇದರಿಂದ ದೇಶ, ಜನತೆಗೆ ಶಾಂತಿ, ನೆಮ್ಮದಿ ದೊರಕಲಿ ಎಂದು ಹೇಳಿದರು. ಟ್ರಸ್ಟ್ ಕಾರ್ಯದರ್ಶಿ ಗೋವಿಂದ, ಪದಾಧಿಕಾರಿಗಳಾದ ಪ್ರಕಾಶ್, ಸುಂದರ್, ಶಂಕರ್ ಹಾಗೂ ಮಹದೇವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Font Awesome Icons

Leave a Reply

Your email address will not be published. Required fields are marked *