ಎಲ್ಲರೂ ಬಾಯಿ ಚಪ್ಪರಿಸಿ ತಿನ್ನೋ ಈ ದೋಸೆಯಲ್ಲಿ ಅದೆಷ್ಟೋ ಬಗೆಗಳಿವೆಯೋ ದೋಸೆಗೆ ಗೊತ್ತು ನೋಡಿ. ಸೆಟ್ ದೋಸೆ, ಮಸಾಲಾ ದೋಸೆ, ಬೆಣ್ಣೆ ದೋಸೆ, ಈರುಳ್ಳಿ, ರವಾ ದೋಸೆ ಇತ್ಯಾದಿ ಇತ್ಯಾದಿ. ಹೇಳ್ತಾ ಹೋದ್ರೆ ಹನುಮಂತನ ಬಾಲದ ರೀತಿ ದೋಸೆ ಬಗೆಗಳು ಬೆಳೆಯುತ್ತನೇ ಹೋಗುತ್ತದೆ.
ಅಡೈ ದೋಸೆ
ಒಂದೊಂದು ದೋಸೆಯ ರುಚಿ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಈ ಸಾಲಿನಲ್ಲಿ ಮತ್ತೊಂದು ಸೇರ್ಪಡೆಯಾಗಿ ಅಡೈ ದೋಸೆ ಕೂಡ ಇದೆ. ಕೆಲವರಿಗೆ ಈ ದೋಸೆ ಚಿರಪರಿಚಿತವಾದ್ರೂ ಇನ್ನು ಕೆಲವರಿಗೆ ಇದರ ಬಗ್ಗೆ ಗೊತ್ತಿಲ್ಲ.ಚಟ್ನಿ, ಪಲ್ಯ ಇಲ್ಲದೆಯೇ ತಿನ್ನಬಹುದಾದ ರುಚಿಕರ ದೋಸೆ ಇದು. ಕೇವಲ ರುಚಿ ಮತ್ತು ವಿನ್ಯಾಸಕ್ಕಾಗಿ ಅಲ್ಲದೇ ಆರೋಗ್ಯರಕವಾಗಿರುವ ಈ ದೋಸೆಯನ್ನು ಮಾಡೋದು ಹೇಗೆ ಅಂತಾ ನೋಡೋಣ.
ಅಡೈ ದೋಸೆಗೆ ಬೇಕಾದ ಪದಾರ್ಥಗಳು:
1 ಕಪ್ – ಅಕ್ಕಿ
½ ಕಪ್ – ಉದ್ದಿನಬೇಳೆ
¼ ಕಪ್ – ತೊಗರಿ ಬೇಳೆ
¼ ಕಪ್ – ಕಡ್ಲೆ ಬೇಳೆ
½ ಟೀಸ್ಪೂನ್ – ಮೆಂತ್ಯ
4-5 – ಒಣಗಿದ ಕೆಂಪು ಮೆಣಸಿನಕಾಯಿಗಳು
ಮೂರ್ನಾಲ್ಕು ಕರಿಬೇವಿನ ಎಸಳು
ಒಂದು ಚಿಟಿಕೆ ಇಂಗು
ಉಪ್ಪು, ರುಚಿಗೆ
ಅಡೈ ದೋಸೆ ಮಾಡುವ ವಿಧಾನ
ಅಕ್ಕಿ, ಉದ್ದಿನಬೇಳೆ, ತೊಗರಿ ಬೇಳೆ, ಕಡ್ಲೆಬೇಳೆ ಮತ್ತು ಮೆಂತ್ಯೆಯನ್ನು ಚೆನ್ನಾಗಿ ತೊಳೆದು, ಅದಕ್ಕೆ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ನೀರಲ್ಲಿ ನೆನಸಿಡಿ.
ಬಳಿಕ ನೀರನ್ನು ಮಾತ್ರ ಬಸಿದುಕೊಳ್ಳಬೇಕು. ನಂತರ ಒಂದು ಮಿಕ್ಸರ್ ಜಾರ್‌ಗೆ ನೆನೆಸಿದ್ದ ಪದಾರ್ಥಗಳ ಹಾಕಿಕೊಂಡು ರುಬ್ಬಿಕೊಳ್ಳಬೇಕು. ತದನಂತರ ಪಾತ್ರೆಗೆ ಹಾಕಿ ಒಮ್ಮೆ ಕೈಯಿಂದ ಎಲ್ಲವನ್ನೂ ಮಿಶ್ರಣ ಮಾಡಿ ಹುದುಗಲು ಬಿಡಿ. ಬೆಳಗ್ಗೆ ಎದ್ದು ದೋಸೆ ಮಾಡಿಕೊಳ್ಳುವಾಗ ಇದಕ್ಕೆ ಉಪ್ಪು, ಇಂಗು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಆಮೇಲೆ ದೋಸೆ ಕಾವಲಿ ತೆಗೆದುಕೊಂಡು ಎಣ್ಣೆ ಇಲ್ಲಾ ತುಪ್ಪ ಹಚ್ಚಿಕೊಂಡು ದೋಸೆಯನ್ನು ಸರಿಯಾಗಿ ಹುಯ್ಯಿರಿ ಮತ್ತು ಅದನ್ನು ಕಾವಲಿಯಲ್ಲಿ ಸ್ಟ್ರೆಡ್ ಮಾಡಿ. ದೋಸೆಯ ಮೇಲೆ ತುಪ್ಪ ಹಾಕಿಕೊಂಡರೆ ಮತ್ತಷ್ಟು ರುಚಿ ಎನಿಸುತ್ತದೆ.
ಟಿಪ್ಸ್
ಈ ದೋಸೆ ಮಾಡಿಕೊಳ್ಳಲು ಹಿಟ್ಟನ್ನು ಆದಷ್ಟು ತರಿತರಿಯಾಗಿ ರುಬ್ಬಿಕೊಳ್ಳಿ. ಹುಳಿ ಬರುವುದನ್ನು ತಡೆಯಲು ಫ್ರಿಡ್ಜ್‌ನಲ್ಲಿ ಇರಿಸಬಹುದು. ದೋಸೆ ಮಾಡಿಕೊಳ್ಳಬೇಕು ಎನ್ನುವ ಒಂದೆರೆಡು ಗಂಟೆ ಮುಂಚೆ ಫ್ರಿಡ್ಜ್‌ನಿಂದ ತೆಗೆದು ಮಾಡಿಕೊಳ್ಳಬಹುದು.