ಉಡುಪಿ: ಬೋಧ್ ಗಯಾದ ಮಹಾಬೋಧಿ ಬುದ್ಧ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಬೌದ್ಧ ವೇದಿಕೆಯ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಯ ಮುಂಭಾಗದಲ್ಲಿ ಇಂದು ಧರಣಿ ನಡೆಸಲಾಯಿತು.
ಬಿಹಾರ ರಾಜ್ಯದ ಬೋಧ್ ಗಯಾದಲ್ಲಿರುವ ಮಹಾಬೋಧಿ ಬುದ್ಧ ವಿಹಾರವು ಸಮಸ್ತ ಬೌದ್ಧರ ಶ್ರದ್ಧಾ ಕೇಂದ್ರವಾಗಿದೆ. ಆದರೆ ಈ ಮಹಾಬೋಧಿ ಬುದ್ಧ ವಿಹಾರದ ಆಡಳಿತವು ಸಂಪೂರ್ಣವಾಗಿ ಬೌದ್ಧರ ಕೈಯಲ್ಲಿ ಇಲ್ಲ. ಇದು ಅನ್ಯಾಯ. ಹೀಗಾಗಿ ಮಹಾಬೋಧಿ ಬುದ್ಧ ವಿಹಾರದ ಆಡಳಿತ ಮತ್ತು ಅಧಿಕಾರವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಧರಣಿ ನಿರತರು ಒತ್ತಾಯಿಸಿದರು.
ಧರಣಿ ಬಳಿಕ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಲಾಯಿತು. ರಾಜ್ಯ ಸಮಿತಿಯ ನಿರ್ದೇಶನದಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಏಕಕಾಲಕ್ಕೆ ಈ ಧರಣಿ ನಡೆಯಿತು.
ದಸಂಸ ಅಂಬೇಡ್ಕರ್ ವಾದದ ರಾಜ್ಯ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಬೋಧ್ ಗಯಾದ ಮಹಾಬೋಧಿ ಬುದ್ಧ ವಿಹಾರ ವೈದಿಕ ಶಾಹಿಗಳ ಅಧಿಕಾರದಲ್ಲಿದೆ. ಅದನ್ನು ಹಿಂಪಡೆದು ಬೌದ್ಧರಿಗೆ ನೀಡಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಬೌದ್ಧರ ಧಾರ್ಮಿಕ ಕೇಂದ್ರವನ್ನು ಅವರಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ಬೌದ್ಧ ವೇದಿಕೆಯ ಜಿಲ್ಲಾ ಸಂಚಾಲಕ ಮಂಜುನಾಥ್ ಮಾತನಾಡಿ, ವಿದೇಶಿಗರು ಹಾಗೂ ದೇಶದ ಸನಾತನಿಗಳ ದಾಳಿಯಿಂದ ಬೌದ್ಧ ಧರ್ಮ ಅವನಸದ ಅಂಚಿಗೆ ತಲುಪಿದ್ದು, ಇದರ ಲಾಭವನ್ನು ಪಡೆದು ಬೋಧ್ ಗಯಾದ ಮಹಾಬೋಧಿ ಬುದ್ಧ ವಿಹಾರವನ್ನು ಸ್ವಾಧೀನಕ್ಕೆ ಪಡೆದುಕೊಂಡು ತಮ್ಮ ಚಟುವಟಿಕೆಗಳನ್ನು ಆರಂಭಿಸಿದರು. ಇದು ಬೌದ್ಧರ ಮೇಲೆ ನಡೆದ ಐತಿಹಾಸಿಕ ಅನ್ಯಾಯವಾಗಿದೆ. ಹೀಗಾಗಿ ಬೌದ್ಧರ ಧಾರ್ಮಿಕ ಕೇಂದ್ರವನ್ನು ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿದರು.