ನವದೆಹಲಿ: ಭಾತರದಲ್ಲಿ ಕ್ಯಾನ್ಸರ್ ಪ್ರಮಾಣ ಏರಿಕೆಯಾಗುತ್ತಿದ್ದು, ೧೪.೧ ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ೯.೧ ಲಕ್ಷ ಜನ ಕ್ಯಾನ್ಸರ್ ನಿಂದ ನಿಧನರಾಗುತ್ತಿದ್ದು, ಸ್ತನದ ಕ್ಯಾನ್ಸರ್ ಅಧಿಕವಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಕುರಿತು ಅಧ್ಯಯನ ನಡೆಸಿದ ಅಂತರಾಷ್ಟ್ರೀಯ ಸಂಸ್ಥೆ IARC, ಪುರುಷರಲ್ಲಿ ತುಟಿ, ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ ಹಾಗು ಗರ್ಭಕೊರಳಿನ ಕ್ಯಾನ್ಸರ್ ಹೆಚ್ಚಾಗಿ ವರದಿಯಾಗುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಶೇ.೨೭ ಹಾಗು ಶೇ.೧೮ರಷ್ಟಿದೆ ಎಂದು ಹೇಳಿದೆ.
ಕಳೆದ ಐದು ವರ್ಷಗಳಿಂದ ಕ್ಯಾನ್ಸರ್ ಗೆ ತುತ್ತಾದವರ ಸಂಖ್ಯೆ ೩೨.೬ ಲಕ್ಷಕ್ಕೆ ಏರಿಕೆಯಾಗಿದ್ದು, ಜಾಗತಿಕವಾಗಿ ಇದರ ಪ್ರಮಾಣ ೨ ಕೋಟಿಯಷ್ಟಿದೆ. ಸರಾಸರಿ ಪ್ರತಿ ಐವರಲ್ಲಿ ಒಬ್ಬರು ತಮ್ಮ ಜೀವಾವಧಿಯಲ್ಲಿ ಕ್ಯಾನ್ಸರ್ ಗೆ ಒಳಗಾಗುತ್ತಿದ್ದಾರೆ. ಪುರುಷರಲ್ಲಿ ಪ್ರತಿ ೯ ಜನರಲ್ಲಿ ಒಬ್ಬರು ಹಾಗು ಮಹಿಳೆಯರಲ್ಲಿ ಪ್ರತಿ ೧೨ರಲ್ಲಿ ಒಬ್ಬರು ಕ್ಯಾನ್ಸರ್ ನಿಂದ ಮೃತಪಡುತ್ತಿದ್ದಾರೆ.
ವಿಶ್ವದಲ್ಲಿ ಶ್ವಾಸಕೋಶ ಕ್ಯಾನ್ಸರ್ ಗೆ ಬಲಿಯಾಗುತ್ತಿರುವವರ ಸಂಖ್ಯೆ ಅಧಿಕವಾಗಿದ್ದು, ಸ್ತನ ಕ್ಯಾನ್ಸರ್ ಕೂಡ ಅಧಿಕ ಪ್ರಮಾಣದಲ್ಲಿ ವರದಿಯಾಗುತ್ತಿದೆ.