ಮುಂಬೈ: ಭಾರತ ಕ್ರಿಕೆಟ್ ತಂಡ ಸ್ಟಾರ್ ಆಟಗಾರರು ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್. ಇವರನ್ನು ಆದಷ್ಟು ಬೇಗ ಗುಣಮುಖರಾಗಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ.
ಸೂರ್ಯಕುಮಾರ್ ಯಾದವ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಿರುವ ಬಿಸಿಸಿಐ, ಇದೀಗ ಮೊಹಮ್ಮದ್ ಶಮಿ ಮತ್ತು ರಿಷಭ್ ಪಂತ್ ಅವರನ್ನು ಕೂಡ ವಿದೇಶಕ್ಕೆ ಕಳುಹಿಸಲು ನಿರ್ಧಾರ ಮಾಡಿದೆ.
ಮೊಹಮ್ಮದ್ ಶಮಿ ಪಾದದ ಗಾಯಕ್ಕೆ ಒಳಗಾಗಿದ್ದರು. ವಿಶ್ವಕಪ್ ಬಳಿಕ ಇವರು ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ಹೊರಗುಳಿದಿದ್ದರು. ಪ್ರಸ್ತುತ, ಶಮಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಶಮಿ ತಜ್ಞ ವೈದ್ಯರನ್ನು ಸಂಪರ್ಕಿಸಲು ಶಮಿ ಲಂಡನ್ಗೆ ತೆರಳಲಿದ್ದಾರೆ.
ರಿಷಭ್ ಪಂತ್ ಅವರನ್ನು ಕೂಡ ಬಿಸಿಸಿಐ ಶೀಘ್ರದಲ್ಲೇ ಲಂಡನ್ಗೆ ಕಳುಹಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. 30 ಡಿಸೆಂಬರ್ 2022 ರಂದು ದೆಹಲಿಯಿಂದ ರೂರ್ಕಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದಾಗ ಪಂತ್ ಕಾರು ಅಪಘಾತಕ್ಕೊಳಗಾದರು. ಈ ಅಪಘಾತದಲ್ಲಿ ಪಂತ್ ತೀವ್ರವಾಗಿ ಗಾಯಗೊಂಡಿದ್ದರು.