ಪಂಜಾಬ್: ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ಮೊದಲ ಟಿ20 ಪಂದ್ಯವು ಗುರುವಾರ ನಡೆಯಲಿದೆ. ಈ ಪಂದ್ಯಕ್ಕಾಗಿ ಕ್ರೀಡಾಂಗಣದ ಸುತ್ತ ಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸ್ಟೇಡಿಯಂನ ಒಳಗೆ ಮತ್ತು ಹೊರಗೆ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಪಂದ್ಯದ ವೇಳೆ 1500 ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುವುದು. ಪ್ರವೇಶ ದ್ವಾರದಲ್ಲಿ ವಿಡಿಯೋ ಹೆಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪಂದ್ಯ ವೀಕ್ಷಿಸಲು ಬಂದಿರುವ ಒಟ್ಟು ಪ್ರೇಕ್ಷಕರ ಮಾಹಿತಿ ದೊರೆಯಲಿದೆ.
ಹೊರ ರಾಜ್ಯಗಳಿಂದ ಮತ್ತು ಬೆಟಾಲಿಯನ್‌ಗಳಿಂದ ಪೊಲೀಸರನ್ನು ಕರೆಸಲಾಗಿದೆ. ಪಂದ್ಯದ ವೇಳೆ ಭದ್ರತೆಗಾಗಿ ಕ್ರೀಡಾಂಗಣದ ಹೊರಗೆ ಮತ್ತು ಒಳಗೆ 1000 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುತ್ತಮುತ್ತ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ 500 ಕ್ಯಾಮೆರಾಗಳನ್ನು ಇಡಲಾಗಿದೆ.
ಕ್ರೀಡಾಂಗಣದಲ್ಲಿ 500 ಮೆಗಾಪಿಕ್ಸೆಲ್ ಸೇರಿದಂತೆ ಒಟ್ಟು ನಾಲ್ಕು ವಿಶೇಷ ಕ್ಯಾಮೆರಾಗಳು ಇವೆ. ಇವುಗಳ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಸ್ಪಷ್ಟ ಚಿತ್ರಣವನ್ನು ಕಾಣಬಹುದು. ಇದರಿಂದ ಯಾವುದೇ ಗೊಂದಲದ ಸಂದರ್ಭದಲ್ಲಿ ಪ್ರೇಕ್ಷಕರನ್ನು ಗುರುತಿಸಲು ಸಹಾಯಕವಾಗಲಿದೆ.
ಕ್ರೀಡಾಂಗಣದ ನಾಲ್ಕೂ ದಿಕ್ಕುಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಸನದ ಮೇಲೆ ಕುಳಿತ ವ್ಯಕ್ತಿಯನ್ನು ಗುರುತಿಸಲು ಮತ್ತು ವೀಡಿಯೊದಿಂದ ಸ್ಪಷ್ಟ ಚಿತ್ರವನ್ನು ಹೊರತೆಗೆಯಲಾಗುತ್ತದೆ. ಕ್ಯಾಮೆರಾಗಳ ನಿಯಂತ್ರಣ ಕೊಠಡಿ ಕ್ರೀಡಾಂಗಣದಲ್ಲಿಯೇ ಇರಲಿದ್ದು, ಆಡಳಿತ ಅಧಿಕಾರಿಗಳು ನಿಗಾ ಇಡಲಿದ್ದಾರೆ.