ಭಿಲಾಯ್ ಉಕ್ಕು ಕಾರ್ಖಾನೆಗೆ ಕೇಂದ್ರ ಸಚಿವ HD ಕುಮಾರಸ್ವಾಮಿ ಭೇಟಿ, ಪರಿಶೀಲನೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಭಿಲಾಯ್,ಸೆಪ್ಟಂಬರ್,17,2024 (www.justkannada.in):  ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಛತ್ತೀಸಗಢದ ಭಿಲಾಯ್ ಉಕ್ಕು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳವಾರ ಬೆಳಗ್ಗೆ ಕಾರ್ಖಾನೆಗೆ ಆಗಮಿಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಭಾರತೀಯ ಉಕ್ಕು ಪ್ರಾಧಿಕಾರ (SAIL) ಅಧ್ಯಕ್ಷ ಅಮರೆಂದು ಪ್ರಕಾಶ್, ಕಾರ್ಖಾನೆಯ ನಿರ್ದೇಶಕ ಅರ್ಬಿನ್ ದಾಸ್ ಗುಪ್ತಾ ಸೇರಿದಂತೆ ಇತರೆ ಎಲ್ಲಾ ಅಧಿಕಾರಿಗಳ ಜತೆ ಕಾರ್ಖಾನೆಯನ್ನು ವೀಕ್ಷಿಸಿದರು.

ಸುಮಾರು 13 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿರುವ ಕಾರ್ಖಾನೆಯ ವಿವಿಧ ವಿಭಾಗಗಳಿಗೆ ಕೇಂದ್ರ ಸಚಿವ ಹೆಚ್.ಡಿಕೆ ಭೇಟಿ ನೀಡಿದರು. ಮುಖ್ಯವಾಗಿ ಎರಡು ಬೃಹತ್ ಕುಲುಮೆಗಳಿಗೆ ಸಚಿವರು ಭೇಟಿ ನೀಡಿ ಅದಿರು ಕರಗಿಸುವ, ಕರಗಿದ ಉಕ್ಕನ್ನು ಘನೀಕೃತಗೊಳಿಸುವ ಹಾಗೂ ಬಿಸಿ ಲೋಹವನ್ನು ಉಕ್ಕಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಕೊನೆಯಲ್ಲಿ ರೇಲ್ವೆ ಮಿಲ್ ಗೆ ಭೇಟಿ ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು,  ರೈಲಿನ ಹಳಿ ತಯಾರಾಗುವ ಪ್ರಕ್ರಿಯೆಯನ್ನು ವೀಕ್ಷಿಸಿದರು. ಅಲ್ಲದೆ, ತಾಂತ್ರಿಕ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

ವಿಶ್ವಕರ್ಮ ಜಯಂತಿ ಆಚರಣೆ:

ಭಗವಾನ್ ವಿಶ್ವಕರ್ಮ ಜಯಂತಿ ಅಂಗವಾಗಿ ಕಾರ್ಖಾನೆಯ ಅನೇಕ ವಿಭಾಗಗಳಲ್ಲಿ ಕಾರ್ಮಿಕರು ವಿಶ್ವಕರ್ಮ ಪೂಜೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕರ ಜತೆಯಲ್ಲಿಯೇ ಪೂಜೆಯಲ್ಲಿ ಭಾಗಿಯಾದ ಸಚಿವ ಹೆಚ್ ಡಿಕೆ, ಖುದ್ದಾಗಿ ಕಾರ್ಮಿಕರಿಗೆ ವಿಶ್ವಕರ್ಮ ಜಯಂತಿ ಶುಭಾಶಯ ಕೋರಿದರು.

ಅಧಿಕಾರಿಗಳ ಜತೆ ಸಭೆ, ಕಾರ್ಖಾನೆ ಬಗ್ಗೆ ಸಂತಸ:

ಉಕ್ಕು ಸ್ಥಾವರ ವೀಕ್ಷಣೆ ನಂತರ ಉನ್ನತ ಅಧಿಕಾರಿಗಳ ಜತೆ ಸಭೆ ನಡೆದ ಸಚಿವ ಕುಮಾರಸ್ವಾಮಿ ಅವರು,  1959ರಲ್ಲಿ ಆರಂಭವಾದ ಉಕ್ಕು ಸ್ಥಾವರ ಇದು. ಸುದೀರ್ಘವಾದ ಹಾದಿ ಕ್ರಮಿಸಿದೆ. ಅನೇಕ ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ದೇಶದ ನಿರ್ಮಾಣಕ್ಕೆ ಈ ಕಾರ್ಖಾನೆಯ ಕೊಡುಗೆ ದೊಡ್ಡದು ಎಂದರು.

ಈ ಕಾರ್ಖಾನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ನನಗೆ ತೃಪ್ತಿ ಇದೆ. ಆದರೂ ನೀವು ಉಕ್ಕು ಕ್ಷೇತ್ರದಲ್ಲಿ ಎದುರಾಗುತ್ತಿರುವ ಪೈಪೋಟಿಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ದೇಶದ ಬೊಕ್ಕಸಕ್ಕೆ ಕಾರ್ಖಾನೆ ದೊಡ್ಡ ಕೊಡುಗೆ ನೀಡುತ್ತಿದೆ.  ಖಾಸಗಿ ಕ್ಷೇತ್ರವೂ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಅದಕ್ಕೆ ತಕ್ಕ ಹಾಗೆ ಈ ಕಾರ್ಖಾನೆಯು ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಛತ್ತೀಸಗಢ ರಾಜ್ಯಕ್ಕೆ ಕಾರ್ಖಾನೆಯು ಸಿಎಸ್ ಆರ್ ಮೂಲಕ ನೀಡುತ್ತಿರುವ ಕೊಡುಗೆ ಅಪಾರ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಜನರ ಶ್ರೇಯೋಭಿವೃದ್ಧಿಗೆ ಬಿಲಾಯ್ ಉಕ್ಕು ಕಾರ್ಖಾನೆ ನೀಡುತ್ತಿರುವ ಕೊಡುಗೆ ಬಗ್ಗೆ ಕೇಂದ್ರ ಸಚಿವ ಹೆಚ್ ಡಿಕೆ ಸಂತಸ ವ್ಯಕ್ತಪಡಿಸಿದರು.

Key words: Union Minister, HD Kumaraswamy, visits, Bilai steel factory

Font Awesome Icons

Leave a Reply

Your email address will not be published. Required fields are marked *