ಮಂಗಳೂರು: ‘ಓಣಂ ಹಬ್ಬವು ಸಂಸ್ಕೃತಿಯನ್ನು ಬೆಸೆಯುವುದರೊಂದಿಗೆ ಮನಸ್ಸುಗಳನ್ನು ಒಂದುಗೂಡಿಸುವ ಹಬ್ಬ. ಈ ಸಾಂಸ್ಕೃತಿಕ ಹಬ್ಬ ನಾಡಿನಾದ್ಯಂತ ಸಮೃದ್ಧಿಯನ್ನು ಹಾಗೂ ಒಳಿತನ್ನು ತರಲಿ’ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಇಂಜಿನಿಯರ್ ಆಗಿರುವ ಡಾ ಜೋಸ್ ಕೊಚಿಕ್ ತಿಳಿಸಿದರು.
ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಸಾಂಸ್ಕೃತಿಕ ಸಂಘ ಹಾಗೂ ಐಕ್ಯೂಎಸಿ ವಿಭಾಗ ಆಯೋಜಿಸಿದ ಓಣಂ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಇವರು ನಾವೆಲ್ಲ
ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರಾಗಬೇಕು. ಆ ಮೂಲಕ ವಿದ್ಯಾರ್ಥಿಗಳು ಸಮಾಜಕ್ಕೊಂದು ದೊಡ್ಡ ಆಸ್ತಿಯಾಗಿ ಬೆಳೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಡಾ. ಮೈಕಲ್ ಸಾಂತುಮಾಯೋರ್ ಓಣಂ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಂಯೋಜಕರಾದ ಅಧೀರ, ವಿದ್ಯಾರ್ಥಿ ನಾಯಕಿ ಜೂಯಿಜಾಯ್ಸ್ ಡಿಕುನ್ಹಾ, ಓಣಂ ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ಖಲಂದರ್ ಶಾಫಿ ಉಪಸ್ಥಿತರಿದ್ದರು. ಉಪನ್ಯಾಸಕಿ ಶಾಹಿದ ಅಂಜುಮ್ ಓಣಂ ವಿಶೇಷತೆಯನ್ನು ತಿಳಿಸಿದರು. ಎಫ್ ಎನ್ ಡಿ ವಿಭಾಗದ ಮುಖ್ಯಸ್ಥೆ ಪ್ರತಿಭಾ ಡಿ ಸೋಜಾ ಸ್ವಾಗತಿಸಿದರು. ಉಪನ್ಯಾಸಕಿ ಲೆನಿಷ ನಿರೂಪಿಸಿದರು.