ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಹಳೆ ಕ್ಯಾಂಪಸ್‌ಗೆ ಆಧುನಿಕ ಸ್ಪರ್ಶ: ಬಿಷಪ್ ಹೇಮಚಂದ್ರ ಕುಮಾರ್

ಉಡುಪಿ: ಉಡುಪಿ ಮಿಶನ್ ಕಂಪೌಂಡ್‌ನ ಬಾಸೆಲ್ ಮಿಶನರಿಸ್ ಮೆಮೋರಿಯಲ್ ಆಡಿಟೋರಿಯಂ ಬಳಿಯ ನವೀಕೃತ ಉಡುಪಿ ಲೊಂಬಾರ್ಡ್ ಮೆಮೋರಿಯಲ್ (ಮಿಶನ್ ಆಸ್ಪತ್ರೆ) ಹಾಸ್ಟಿಟಲ್‌ನ ಲೊಂಬಾರ್ಡ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈನ್ಸ್‌ಸ್‌ನ ನೂತನ ಕ್ಯಾಂಪಸ್ ಉದ್ಘಾಟನೆಗೊಂಡಿತು.

ನೂತನ ಕ್ಯಾಂಪನ್ ಉದ್ಘಾಟಿಸಿದ ಸಿಎಸ್‌ಐ, ಕೆಎಸ್‌ಡಿ ಬಿಷಪ್ ಹೇಮಚಂದ್ರ ಕುಮಾರ್ ಮಾತನಾಡಿ, ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ 1855ರ ಹಳೆ ಕ್ಯಾಂಪಸ್‌ಗೆ ಆಧುನಿಕ ಸ್ಪರ್ಶ ಕೊಟ್ಟು ಲೊಂಬಾರ್ಡ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈನ್ಸ್‌ಸ್ ಕ್ಯಾಂಪಸ್‌ಯನ್ನು ಲೋಕಾರ್ಪಣೆ ಮಾಡಿದ್ದೇವೆ. ಮಿಶನರಿಸ್‌ನ ಉದ್ದೇಶಿತ ಮುಂದುವರಿದ ಭಾಗವಾಗಿ ಈ ಕಟ್ಟಡ ನಿರ್ಮಾಣಗೊಂಡಿದೆ. ತರಗತಿ ಕೊಠಡಿ, ಗ್ರಂಥಾಲಯ ಸಹಿತ ವಿದ್ಯಾರ್ಜನೆಗೆ ಬೇಕಾದ ಎಲ್ಲಾ ಸಲವತ್ತುಗಳನ್ನು ನೀಡಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ಲೊಂಬಾರ್ಡ್ ಆಸ್ಪತ್ರೆಗೆ ಇದೊಂದು ಮೈಲಿಗಲ್ಲು. ದೇಶ, ವಿದೇಶಗಳಲ್ಲಿ ನರ್ಸಿಂಗ್, ಟೆಕ್ನಿಷಶನ್‌ಗಳಿಗೆ ಹೇರಳ ಉದ್ಯೋಗಾವಕಾಶಗಳಿದ್ದು, ನುರಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಪ್ಯಾರಾಮೆಡಿಕಲ್ ಕಾಲೇಜು ತೆರೆದಿದ್ದೇವೆ. ಒಳ್ಳೆಯ ಶಿಕ್ಷಣ, ತರಬೇತಿ ಕೊಡುತ್ತೇವೆಂದು ತಿಳಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿದರು. ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಮುಖಂಡ ಪ್ರಶಾಂತ್ ಜತ್ತನ್ನ ಶುಭಹಾರೈಸಿದರು. ಧರ್ಮಗುರುಗಳಾದ ರೆ.ಐವನ್ ಡಿ.ಸೋನ್ಸ್ ಪ್ರಾರ್ಥಿಸಿದರು. ತಜ್ಞ ವೈದ್ಯರಾದ ಡಾ.ಬಿ.ಎನ್.ಪೆರಾಲಯ ಸ್ವಾಗತಿಸಿದರು. ಪ್ರಮುಖರಾದ ಶಬೀ ಅಹ್ಮದ್ ಕಾಜಿ, ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಕುವೆಂಪು ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ.ಬಿ.ಎಸ್.ಸೇರಿಗಾರ್, ಸ್ಟಾನ್ಲಿ ಕರ್ಕಡ, ಉಡುಪಿ ಶೋಕಾಮಾತ ಇಗರ್ಜಿಯ ಪ್ರಧಾನ ಧರ್ಮಗುರು ಫಾ. ಚಾಲ್ಸ್ ಮಿನೇಜಸ್, ಡಾ.ರೋಶನ್ ಪಾಯಸ್ ಉಪಸ್ಥಿತರಿದ್ದರು. ಲಿಯೋನಾ ಸ್ಟ್ರೆಲಿಟಾ, ಆನೆಟ್ ವೀಕ್ಷಿತಾ ಕಾರ‌್ಯಕ್ರಮ ನಿರೂಪಿಸಿದರು. ಅಕ್ಷತಾ ಪ್ರಭು ವಂದಿಸಿದರು.

Font Awesome Icons

Leave a Reply

Your email address will not be published. Required fields are marked *