ಮಂಗಳೂರು: ಭಜರಂಗದಳ-ವಿ.ಎಚ್.ಪಿ ಯಿಂದ ಬಿ.ಸಿ.ರೋಡ್ ಚಲೋ ಕರೆ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯವಾಹ ಶರಣ್ ಪಂಪ್ ವೆಲ್ ಭೇಟಿ ನೀಡಿ, ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಪ್ ನ ಸವಾಲಿಗೆ ಉತ್ತರಕೊಡಲು ಬಂದಿದ್ದೇನೆ ಎಂದು ಬಹಿರಂಗ ಘೋಷಣೆ ಮಾಡಿದರು. ಆರಂಭದಲ್ಲಿ ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗೂತ್ತಾ ಪೋಲೀಸರ ತಡೆಯನ್ನು ಲೆಕ್ಕಿಸದೆ ಮುಂದೆ ಸಾಗಿದರು. ಈ ವೇಳೆ ಪೋಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ ಮೀರಿಹೋಗುವ ಹಂತಕ್ಕೆ ತಲುಪಿದಾಗ ಪೋಲೀಸರು ಬಸ್ ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಕಾರ್ಯಕರ್ತರಿಗೆ ತಡೆಯೊಡ್ಡಿದರು. ಈ ಮೂಲಕ ಬಿಸಿ ರೋಡ್ ಮತ್ತೆ ಸಹಜ ಸ್ಥಿತಿಗೆ ತರುವಲ್ಲಿ ದ. ಕ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ದ. ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್ ಯತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೈಕಂಬ ಮಸೀದಿಯ ಈದ್ ಮಿಲಾದ್ ಮೆರವಣಿಗೆ ರೂಟ್ ಬದಲಾವಣೆ ನಾವು ಮಾಡಿಲ್ಲ. ಹಾಗಾಗಿ ಬಿಸಿ ರೋಡ್ ಜಂಕ್ಷನ್ ನಲ್ಲಿ ಅವಕಾಶವನ್ನ ನೀಡಿದ್ದೆವು. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ವಿ. ಪ್ರಚೋದನಾಕಾರಿ ಆಡಿಯೋ ಹರಿ ಬಿಟ್ಟ ಇಬ್ಬರ ಮೇಲೇಯೂ ಕ್ರಮವಾಗಿದೆ. ಆಡಿಯೋ ಹರಿಬಿಟ್ಟ ಶರೀಫ್ ಹಾಗೂ ಹಸೀನಾರ್ ಇಬ್ಬರನ್ನು ಬಂಧಿಸಿದ್ದೇವೆ. ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಮುನ್ನವೇ ಶಾಂತಿ ಸಭೆ ಮಾಡಿದ್ವಿ. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭ
ವಿಸಿಲ್ಲ. ಮುಂದೆಯೂ ಅಹಿತಕರ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳುತ್ತೇವೆ. ಪರಿಸ್ಥಿತಿಗೆ ಅನುಗುಣವಾಗಿ ಬಿಸಿ ರೋಡಿನಲ್ಲಿ ಬಂದೋಬಸ್ತ್ ಮುಂದುವರೆಸುತ್ತೇವೆ ಎಂದಿದ್ದಾರೆ.