ಮೈಸೂರು: ನಂಜನಗೂಡು ತಾಲೂಕಿನ ಸಿದ್ದಯ್ಯನಹುಂಡಿ ಗೇಟ್ ಬಳಿಯ ಮದ್ಯದಂಗಡಿ ತೆರವುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಬಕಾರಿ ಇಲಾಖೆಯ ಆವರಣದಲ್ಲಿ ಜಮಾವಣೆಗೊಂಡ ರೈತ ಸಂಘದ ಕಾರ್ಯಕರ್ತರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂಜನಗೂಡು ತಾಲ್ಲೂಕು ಕಸಬಾ ಹೋಬಳಿಯ ಕಸುವಿನಹಳ್ಳಿ ಗ್ರಾಮಕ್ಕೆ ಸೇರಿದ ಸಿದ್ದಯ್ಯನಹುಂಡಿ ಗೇಟ್ ಬಳಿ ಮದ್ಯದ ಅಂಗಡಿ ತೆರೆದಿರುವುದನ್ನು ಖಂಡಿಸಿ ಮದ್ಯದ ಅಂಗಡಿ ತೆರೆವಿಗೆ ನಿಲುವಳಿಗಳನ್ನು ಮಂಡಿಸಿ ಸರ್ವಾನುಮತದಿಂದ ಗ್ರಾಮ ಪಂಚಾಯಿತಿ ತೀರ್ಮಾನಿಸಿತ್ತು. ಇದಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿ ಮದ್ಯದಂಗಡಿ ತೆರವಿಗೆ ಆದೇಶ ನೀಡಿದ್ದರು. ಆದರೆ, ಇದೀಗ ಮದ್ಯದಂಗಡಿ ಬಾಗಿಲು ತೆರೆದಿರುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ಯದಂಗಡಿ ತೆರವು ಮಾಡಲು 30ದಿನಗಳ ಗಡುವು ನೀಡಲಾಗಿತ್ತು. ಗಡುವು ಮುಗಿದು ಹೋಗಿದ್ದರೂ ಬಾರ್ ಬಾಗಿಲು ತೆಗೆದಿರುತ್ತದೆ. ಇದಕ್ಕೆ ಅಬಕಾರಿ ಇಲಾಖೆಯ ವೈಫಲ್ಯವೇ ಕಾರಣ. ಆದ್ದರಿಂದ ಕೂಡಲೇ ಮದ್ಯದಂಗಡಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಹೆಜ್ಜಿಗೆ ಪ್ರಕಾಶ್, ಮೈಸೂರು ತಾಲೂಕು ಗೌರವಾಧ್ಯಕ್ಷ ನಾಗನಹಳ್ಳಿ ವಿಜಯೇಂದ್ರ, ಯುವ ಘಟಕದ ಅಧ್ಯಕ್ಷ ಮಹೇಂದ್ರ ನಂಜನಗೂಡು, ಪಿ.ಮರಂಕಯ್ಯ ಹಾಗೂ ಕಸುವಿನಹಳ್ಳಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.