ಮದ್ಯದಂಗಡಿ ಬಂದ್‌ ಗೆ ಬೆಂಬಲ ನೀಡದಿರಲು ನಿರ್ಧಾರ

ಮೈಸೂರು: ರಾಜ್ಯದಾದ್ಯಂತ ಮದ್ಯ ಮಾರಾಟವನ್ನು ಇದೇ ತಿಂಗಳ 20ರಂದು ಬಂದ್ ಗೊಳಿಸಿ ಪ್ರತಿಭಟಿಸುವ ಕರೆ ನೀಡಿದ ಬೆನ್ನಲ್ಲೇ ಮೈಸೂರಿನಲ್ಲಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಕರೆ ನೀಡಿರುವ ಮದ್ಯದಂಗಡಿ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ರಾಜ್ಯ ಲಿಕ್ಕರ್ ಮರ್ಚೆಂಟ್ ಡೆವಲಪ್‌ಮೆಂಟ್ ಕೋ-ಅಪರೇಟಿವ್ ಸೊಸೈಟಿ ಹೇಳಿದೆ.

ಮೈಸೂರು-ಚಾಮರಾಜನಗರ ಜಿಲ್ಲೆಯ ಸನ್ನದುದಾರರ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ರಾಜ್ಯ ಲಿಕ್ಕರ್ ಮರ್ಚೆಂಟ್ ಡೆವಲಪ್‌ಮೆಂಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್.ಚಂದ್ರಶೇಖರ್ ಹೇಳಿದ್ದು, ಅಂದು ನಾವು ವ್ಯವಹಾರ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕ 2002-03ರಲ್ಲಿ ನೋಂದಣಿಯಾದ ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಸಂಘ ಬಳಿಕ ನವೀಕರಣ ಮಾಡಿಕೊಂಡಿಲ್ಲ. ಹೀಗಾಗಿ ಅದು ಅಸ್ತಿತ್ವದಲ್ಲಿಲ್ಲ ಎಂದು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯೇ ದೃಢೀಕರಣ ಪತ್ರ ನೀಡಿದೆ. ಅದರ ಅಧ್ಯಕ್ಷ ಗುರುಸ್ವಾಮಿ ಮತ್ತು ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಅವರ ವೈಯಕ್ತಿಕ ಲಾಭಕ್ಕಾಗಿ ಬಂದ್‌ ಗೆ ಕರೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇವೆ ಎಂದರು.

ಸನ್ನದುದಾರರಿಂದ ಹಫ್ತಾ ವಸೂಲಿ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಬೆದರಿಕೆ ಒಡ್ಡಲು ಹಾಗೂ ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಗುರುಸ್ವಾಮಿ ಸಂಘ ಮಾಡಿಕೊಂಡಿದ್ದಾರೆ. ಅವರಿಂದ ಸನ್ನದುದಾರರಿಗೆ ಯಾವುದೇ ಲಾಭವಾಗಿಲ್ಲ. ಅಧಿಕಾರಿಗಳ ವರ್ಗಾವಣೆ ಸರ್ಕಾರದ ನಿರ್ಧಾರ. ಆ ಸಂಘ ಅಧಿಕಾರಿ ಹಾಗೂ ಸಚಿವರಿಗೆ 500 ಕೋಟಿಯಿಂದ 600 ಕೋಟಿಯಷ್ಟು ಹಣ ನೀಡಿದ್ದೇವೆ ಎಂದು ಹೇಳಿಕೆ ಕೊಟ್ಟಿರುವುದು ಸತ್ಯಕ್ಕೆ ದೂರವಾದುದು ಎಂದು ಹೇಳಿದರು.

ಸಂಘ ಮಾಡಿದ ಸುಳ್ಳು ಆರೋಪ ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಪ್ರತಿಧ್ವನಿಸಿ, ಸನ್ನದುದಾರರು ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಸರ್ಕಾರಕ್ಕೆ ಹಣ ನೀಡಿದ ದಾಖಲೆ ಇದ್ದರೆ ಬಹಿರಂಗಪಡಿಸಿದರೆ ನಾವೂ ಅವರ ಜೊತೆಗೆ ನಿಲ್ಲುತ್ತೇವೆ. ಅದು ಸಾಧ್ಯವಾಗದಿದ್ದರೆ ಆರೋಪ ಸುಳ್ಳು ಎಂಬುದನ್ನು ಒಪ್ಪಿಕೊಳ್ಳಲಿ. ಇಲ್ಲದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸನ್ನದುದಾರ ದೇವರಾಜು ಮಾತನಾಡಿ, ನಾವು ಐದು ಅಂಶಗಳ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅದರ ಹೊರತಾಗಿ ವೈಯಕ್ತಿಕ ಲಾಭಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ. ನ.20ರಂದು ನಮ್ಮ ವ್ಯವಹಾರಕ್ಕೆ ತೊಂದರೆ ಮಾಡಿದರೆ ಪೊಲೀಸರಿಗೆ ದೂರು ನೀಡುತ್ತೇವೆ. ರಾಜ್ಯದ ಎಲ್ಲಾ ಭಾಗದಲ್ಲೂ ಇದೇ ರೀತಿ ಸಭೆ ನಡೆಸಿ, ಬಂದ್ ವಿರೋಧಿಸಲಿದ್ದೇವೆ ಎಂದು ಇದೇ ಸಂದರ್ಭ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *