ಬೀದರ್: ‘ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಮುಂದಿನ 2047ರಲ್ಲಿ ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಅಡಿಪಾಯ ಹಾಕಿದಂತಾಗಿದೆ’ ಎಂದು ಕೇಂದ್ರದ ನವಿಕರಿಸಬಹುದಾದ ಇಂಧನ ಮೂಲ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ರೈತರ, ಯುವ ಸಮೂಹ, ಮಹಿಳಾ ವರ್ಗ ಹಾಗೂ ಬಡವರ ಅಭಿವೃದ್ಧಿ . ಹೀಗೆ ನಾಲ್ಕು ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದರು.
‘ಕೇಂದ್ರ ಸರ್ಕಾರ ಬಡವರ, ರೈತರ ಜನಧನ ಖಾತೆಗೆ ₹ 34ಲಕ್ಷ ಕೋಟಿ ಹಣ ಜಮೆ ಮಾಡಿದೆ. 10 ವರ್ಷಗಳಲ್ಲಿ 64ಸಾವಿರ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಿದೆ. ಮುಂದಿನ ದಿನಗಳಲ್ಲಿ 40 ಸಾವಿರಕ್ಕೂ ಹೆಚ್ಚು ‘ನಮೋ ಬೋಗಿ’ಗಳನ್ನು ಪ್ರಾರಂಭಿಸಲು ಯೋಜನೆ ಹಾಕಲಾಗಿದೆ’ ಎಂದು ತಿಳಿಸಿದರು.
ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗಲು ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡಿ, ಮಹಿಳೆಯರು ವರ್ಷಕ್ಕೆ ಕನಿಷ್ಠ 1 ಲಕ್ಷ ದುಡಿಯುವಂತೆ ಮಾಡುವ ಕೇಂದ್ರದ ಲಕ್ಷಾಧಿಪತಿ ದೀದಿ (ಲಖ್‌ಪತಿ ದೀದಿ) ಯೋಜನೆಯನ್ನು ಈಗಿರುವ 2 ಕೋಟಿಯಿಂದ 3 ಕೋಟಿ ಫಲಾನುಭವಿಗಳಿಗೆ ನೀಡಲಾಗುವುದು’ ಎಂದು ತಿಳಿಸಿದರು.
‘ 9ರಿಂದ 14 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕೆ ಹಾಕಿಸಲು ಸರ್ಕಾರ ಉತ್ತೇಜನ ನೀಡಲಿದೆ.ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ ಯೋಜನೆ ವಿಸ್ತರಿಸಲಾಗುವುದು ‘ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ,’ ಫೆ.10 ಮತ್ತು 11 ರಂದು ಜಿಲ್ಲೆಯ ಹಳ್ಳಿಗಳ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ’ ಎಂದರು. ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ವಿಜಯಕುಮಾರ ಪಾಟೀಲ ಗಾದಗಿ ಇದ್ದರು.
ಖಂಡನೆ: ಸಂಸದ ಡಿ.ಕೆ ಸುರೇಶ್ ಅವರು ಸೋಲುವ ಭೀತಿಯಲ್ಲಿ ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ವಿರೋಧ ಮಾಡುವುದೇ ಕಾಂಗ್ರೆಸ್ ಚಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.