ಮಂಗಳೂರು : ಮಿಲಾಗ್ರಿಸ್ ಕಾಲೇಜು ಮಂಗಳೂರು ಇದರ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಐಕ್ಯೂ ಎಸಿಯ ಸಹಯೋಗದೊಂದಿಗೆ ಒಂದು ದಿನದ ಟೆಕ್ಟೋನಿಕ್ ಪಿಯುಸಿ ವಿದ್ಯಾರ್ಥಿಗಳಿಗಾಗಿ ರಾಷ್ಟ್ರ ಮಟ್ಟದ ಐಟಿ ಫೆಸ್ಟ್ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದ ಸಹಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ.ಹರೀಶ್ ಬಿ, ಪ್ರಸ್ತುತ ಪೀಳಿಗೆಯ ಮೇಲೆ ಡಿಜಿಟಲ್ ಪ್ರಪಂಚವು ವ್ಯಾಪಕ ಪ್ರಭಾವವನ್ನು ಬೀರುತ್ತಿದೆ. ಅನೇಕ ಯುವಜನರು ಸಾಮಾಜಿಕ ಮಾಧ್ಯಮದ ಜೊತೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯುತ್ತಿದ್ದಾರೆ, ರೀಲ್ಸ್ ಗಳನ್ನು ರಚಿಸುತ್ತಾರೆ, ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ತೊಡಗಿಸಿಕೊಳ್ಳುವಿಕೆಯು ಯುವ ಜನರ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳು ಬಿರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹಾಗಾಗಿ ವಿದ್ಯಾರ್ಥಿಗಳು ಈ ಡಿಜಿಟಲ್ ತಂತ್ರಜ್ಞಾನಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ.ಫಾ. ಮೈಕಲ್ ಸಾಂತುಮಾಯೋರ್ ಅಧ್ಯಕ್ಷೀಯ ಭಾಷಣ ಮಾಡಿ, ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯ, ಸೃಜನಶೀಲತೆ ಮತ್ತು ಸಹಯೋಗದ ಕಲಿಕೆಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಂತ ಪ್ರಯೋಜನಕಾರಿ ಎಂದರು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ನೃತ್ಯ ಸಂಯೋಜಕಿ ಮತ್ತು ರೂಪದರ್ಶಿ ಶ್ರೀಮತಿ ಮನಿಶಾ ಕೋಟ್ಯಾನ್ ಮತ್ತು ಜನಪ್ರಿಯ ಕಂಟೆಂಟ್ ರೈಟರ್ ಶ್ರೀ ಸುಹಾಗ್ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೇರೆ ಬೇರೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕಿ ಮತ್ತು ಬಿಸಿಎ ವಿಭಾಗದ ಮುಖ್ಯಸ್ಥರಾದ ಸುಶ್ಮಿತಾ ಕುಮಾರಿ ಯು ಸ್ವಾಗತಿಸಿದರು. ವಿದ್ಯಾರ್ಥಿನಿ ಜೈನಾಬ್ ರೀಮ್ ವಂದಿಸಿದರು. ದ್ವಿತೀಯ ವಿದ್ಯಾರ್ಥಿನಿ ಜಿನಿಕಾ ಡಿಸೋಜಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.