ಪಶ್ವಿಮ ಬಂಗಾಳ: ಮುಂದಿನ 7 ದಿನಗಳ ಒಳಗೆ ದೇಶದಾದ್ಯಂತ ಪೌರತ್ವ (CAA: ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಕೇಂದ್ರ ಸಚಿವ ಶಂತನು ಠಾಕೂರ್ ಘೋಷಣೆ ಮಾಡಿದ್ದಾರೆ.
ನಾನು ನಿಮಗೆ ಗ್ಯಾರಂಟಿ ನೀಡುತ್ತೇನೆ, ಪಶ್ಚಿಮ ಬಂಗಾಳ ಮಾತ್ರವಲ್ಲ. ದೇಶದಾದ್ಯಂತ ಸಿಎಎ ಜಾರಿಗೆ ಬರಲಿದೆ. ಪಶ್ಚಿಮ ಬಂಗಾಳದ ಕಕ್ದ್ವೀಪ್ನಲ್ಲಿ ನಡೆದ ಸಮಾವೇಶದಲ್ಲಿ ಕೇಂದ್ರ ಸಚಿವರು ಈ ಘೋಷಣೆ ಮಾಡಿದ್ದಾರೆ. ಠಾಕೂರ್ ಅವರು, ಪಶ್ಚಿಮ ಬಂಗಾಳದ ಬಂಗಾನ್ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಸಿಎಎ ಜಾರಿ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಯಾರೊಬ್ಬರೂ ಕೂಡ ಸಿಎಎ ಜಾರಿಯನ್ನು ತಡೆಯಲು ಆಗುವುದಿಲ್ಲ. ನಾವು ಜಾರಿ ಮಾಡಿಯೇ ತೀರುತ್ತೇವೆ ಎಂದಿದ್ದರು.
ಪೌರತ್ವ ತಿದ್ದುಪಡಿ ಮಸೂದೆಯನ್ನು 2019ರಲ್ಲಿ ಸಂಸತ್ ಅಂಗೀಕರಿಸಿದೆ. ಈ ಮಸೂದೆಯು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಇಲ್ಲಿನ ಪೌರತ್ವ ನೀಡುವುದನ್ನು ಪ್ರತಿಪಾದಿಸುತ್ತದೆ. ಮುಸ್ಲಿಮರನ್ನು ಈ ಕಾಯ್ದೆಯಿಂದ ದೂರ ಇಡಲಾಗಿದೆ. 2014 ಡಿಸೆಂಬರ್ 31ರ ಮೊದಲು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡುತ್ತದೆ.
ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ಆಗುತ್ತಿದ್ದಂತೆಯೇ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ಇದೇ ಕಾರಣಕ್ಕೆ ಕಾನೂನಿನ ಅಧಿನಿಯಮವನ್ನು ಇಲ್ಲಿಯವರೆಗೆ ತಿಳಿಸಿಲ್ಲ. ನಿಯಮ ಜಾರಿಗೊಳಿಸುವ ವಿಚಾರದಲ್ಲಿ ಭಾರತ ಸರ್ಕಾರ ಪದೇ ಪದೆ ಮುಂದೂಡಿಕೆ ಮಾಡುತ್ತಿದೆ. ಇದೀಗ ಕೇಂದ್ರ ಸರ್ಕಾರ ಅದಕ್ಕೆ ಅಂತಿಮ ಟಚ್ ನೀಡಲು ನಿರ್ಧರಿಸಿದ್ದು, ಆನ್ಲೈನ್ ಪೋರ್ಟಲ್ ಕೂಡ ತಯಾರಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಸಿಎಎ ಯಾರಿಗೆ ಅನ್ವಯವಾಗುತ್ತದೆ?
ತಮ್ಮ ಧರ್ಮದ ಕಾರಣಕ್ಕೆ ಕಿರುಕುಳ ಅನುಭವಿಸಿ 31.12.2014 ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಿದೇಶಿಯರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಈ ಮೂರು ದೇಶಗಳು ಸೇರಿದಂತೆ ಯಾವುದೇ ದೇಶದಿಂದ ಭಾರತಕ್ಕೆ ವಲಸೆ ಬರುವ ಮುಸ್ಲಿಮರು ಸೇರಿದಂತೆ ಬೇರೆ ಯಾವುದೇ ವಿದೇಶಿಯರಿಗೆ ಇದು ಅನ್ವಯಿಸುವುದಿಲ್ಲ.
ಇನ್ನು ಸಿಎಎ ಯಾವುದೇ ಭಾರತೀಯ ಪ್ರಜೆಗೆ ಅನ್ವಯಿಸುವುದಿಲ್ಲ. ಎಲ್ಲಾ ಭಾರತೀಯ ನಾಗರಿಕರು ಭಾರತದ ಸಂವಿಧಾನದಿಂದ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಅನುಭವಿಸಲು ಅರ್ಹರಾಗಿರುತ್ತಾರೆ. ಸಿಎಎ ಯಾವುದೇ ಭಾರತೀಯ ನಾಗರಿಕನ ಪೌರತ್ವವನ್ನು ಕಸಿದುಕೊಳ್ಳುವ ಉದ್ದೇಶವನ್ನು ಹೊಂದಿಲ್ಲ. ಈ ವಿಶೇಷ ಕಾನೂನು ಮೂರು ನೆರೆಹೊರೆಯ ದೇಶಗಳಲ್ಲಿ ನಿರ್ದಿಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕೆಲವು ವಿದೇಶಿಯರಿಗೆ ಭಾರತೀಯ ಪೌರತ್ವ ಪಡೆಯಲು ಅನುವು ಮಾಡಿಕೊಡುತ್ತದೆ ಅಷ್ಟೇ.